ADVERTISEMENT

ಗುಜರಾತ್, ಮಹಾರಾಷ್ಟ್ರಗಳಲ್ಲಿ 2 ಬಾರಿ ಕಂಪಿಸಿದ ಭೂಮಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 7:35 IST
Last Updated 14 ಏಪ್ರಿಲ್ 2012, 7:35 IST

ಮುಂಬೈ (ಪಿಟಿಐ/ಐಎಎನ್‌ಎಸ್): ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಶನಿವಾರ ಬೆಳಿಗ್ಗೆ ಲಘುವಾಗಿ ಎರಡು ಬಾರಿ ಭೂಮಿ ಕಂಪಿಸಿದೆ. ರಿಕ್ಟರ್‌ಮಾಪಕದಲ್ಲಿ 4.5 ಹಾಗೂ 4.9 ರಷ್ಟು ತೀವ್ರತೆ ದಾಖಲಾಗಿದೆ.

ಬೆಳಿಗ್ಗೆ 8.53 ಕ್ಕೆ ಗುಜರಾತ್‌ನಲ್ಲಿ ಮೊದಲ ಕಂಪನದ ಅನುಭವವಾಯಿತು. ಇದರ ಕೇಂದ್ರ ಬಿಂದು ಭುಜ್‌ನಲ್ಲಿತ್ತೆಂದು ಹವಾಮಾನ ಇಲಾಖೆ ತಿಳಿಸಿದೆ. ನಂತರ 11.05 ರ ವೇಳೆಗೆ ಮತ್ತೊಂದು ಬಾರಿ ಧಾರಿಣಿ ಕಂಪಿಸಿದಳು. ಇದರ ಕೇಂದ್ರ ಬಿಂದು ಮಹಾರಾಷ್ಟ್ರದ ಸತಾರದಲ್ಲಿತ್ತು.

ಎರಡನೇ ಕಂಪನವಂತೂ ತುಸು ಪ್ರಬಲವಾಗಿತ್ತು. ಇದರ ಅನುಭವ ಮುಂಬೈ, ಥಾಣೆ, ರಾಯ‌ಗಡ, ರತ್ನಗಿರಿ, ಸತಾರ ಹಾಗೂ ಪುಣೆಗಳಲ್ಲಿ ಕಂಡು ಬಂದಿದೆ. ಇದುವರೆಗೂ ಯಾವುದೇ ಹಾನಿಯಾದ ಬಗೆಗೆ ವರದಿಗಳು ಬಂದಿಲ್ಲ. ಸತಾರದಲ್ಲಿರುವ ಕೊಯ್ನಾ ಅಣೆಕಟ್ಟು ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈಯಲ್ಲಿದ್ದ ಅಮಿತಾಭ್ ಬಚ್ಚನ್ ಅವರಿಗೂ ಕೂಡ ಕಂಪನದ ಅನುಭವವಾಗಿದ್ದು, ಟ್ವಿಟರ್‌ನಲ್ಲಿ ಅಮಿತಾಭ್ ಅವರು ಮನೆಯು ಎರಡು ಬಾರಿ ಕೆಲವು ಸೆಕೆಂಡುಗಳ ಕಾಲ ಅದುರಿತು ಎಂದು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.