ADVERTISEMENT

ಗೂಗಲ್ ಮ್ಯಾಪ್‌ನಲ್ಲಿ ಮತದಾನ ಕೇಂದ್ರದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 9:45 IST
Last Updated 15 ಡಿಸೆಂಬರ್ 2012, 9:45 IST
ಗೂಗಲ್ ಮ್ಯಾಪ್‌ನಲ್ಲಿ ಮತದಾನ ಕೇಂದ್ರದ ಮಾಹಿತಿ
ಗೂಗಲ್ ಮ್ಯಾಪ್‌ನಲ್ಲಿ ಮತದಾನ ಕೇಂದ್ರದ ಮಾಹಿತಿ   

ಅಗರ್ತಲ (ಪಿಟಿಐ): ಇನ್ನು ಮುಂದೆ ಚುನಾವಣಾ ಮಾಹಿತಿ ಮತ್ತು ಮತದಾನ ಕೇಂದ್ರಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಉಚಿತವಾಗಿ ಕೆಲವೇ ನಿಮಿಷಗಳಲ್ಲಿ ಪಡೆಯಬಹುದಾಗಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಗೂಗಲ್ ಮ್ಯಾಪ್‌ನಲ್ಲಿ ಲಭ್ಯವಾಗಲಿವೆ. 

  `ಭಾರತದ ಮತದಾರರು ಇನ್ನು ಮುಂದೆ ಮತ ಚಲಾಯಿಸಲು ಮತದಾನ ಕೇಂದ್ರವನ್ನು ಹುಡುಕಾಡುವ ಪ್ರಶ್ನೇಯೇ ಉದ್ಬವಿಸುವುದಿಲ್ಲ. ಮುಂದಿನ ದಿನಗಳಲ್ಲಿ ಮತದಾರರು ತಮ್ಮ ಮತದಾನದ ಕೇಂದ್ರ ಮತ್ತು ಚುನಾವಣೆಯ ನಿಯಮ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಇತರೆ ಮಾಹಿತಿಗಳನ್ನು ಗೂಗಲ್ ಮ್ಯಾಪ್ ಮೂಲಕ ಪಡೆಯಬಹುದು' ಎಂದು ತ್ರಿಪುರಾ ಮುಖ್ಯ ಚುನಾವಣಾ ಅಧಿಕಾರಿ ಅಶುತೋಷ್ ಜಿಂದಾಲ್ ಶನಿವಾರ ಇಲ್ಲಿ ಮಾಹಿತಿ ನೀಡಿದರು.

`ಮತದಾರರು ತಾವು ಮತದಾನ ಮಾಡಬೇಕಾದ ಮತ ಕೇಂದ್ರಗಳ ಬಗ್ಗೆ ಚುನಾವಣಾ ಆಯೋಗ ಅಥವಾ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಖಚಿತ ಮಾಹಿತಿಗಳನ್ನು ಪಡೆಯಬಹುದು' ಎಂದು ಜಿಂದಾಲ್ ತಿಳಿಸಿದರು.

ಈಗಾಗಲೇ ರಾಜಧಾನಿ ನವದೆಹಲಿ, ಹಿಮಾಚಲ ಪ್ರದೇಶ, ಗುಜರಾತ್, ಸಿಕ್ಕಿಂ, ಮೇಘಾಲಯ ಮತ್ತು ತ್ರಿಪುರ ಸೇರಿದಂತೆ ಕೆಲ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಾಗರ್- ಹಾವೇಲಿ,  ದಿಯೂ- ದಾಮನ್‌ನ ಮತ ಕೇಂದ್ರಗಳ ಸ್ಥಳಗಳನ್ನು ಗೂಗಲ್ ಮ್ಯಾಪ್‌ನಲ್ಲಿ ಗುರುತಿಸಲಾಗಿದ್ದು, ಇನ್ನುಳಿದ ಪ್ರದೇಶಗಳ ಮತ ಕೇಂದ್ರಗಳನ್ನೂ ಶೀಘ್ರವೇ ವೆಬ್‌ಸೈಟ್‌ನಲ್ಲಿ ಗುರುತಿಸುವುದಾಗಿ ಜಿಂದಾಲ್ ವಿವರಣೆ ನೀಡಿದರು.

ಬಳಕೆದಾರರು ತಮ್ಮ ಜಿಲ್ಲೆ, ಕ್ಷೇತ್ರ ಮತ್ತು ಮತಕೇಂದ್ರದ ಹೆಸರನ್ನು ವೆಬ್‌ಸೈಟ್‌ಗೆ ನೀಡಿದರೆ ಅವರ ಮತಕೇಂದ್ರ ಇರುವ ಸ್ಥಳದ ನಕ್ಷೆ ಲಭ್ಯವಾಗುತ್ತದೆ.

ಇಷ್ಟೇ ಅಲ್ಲದೆ ಚುನಾವಣಾ ಪಟ್ಟಿ, ಮತದಾರರ ಹೆಸರು ಹಾಗೂ ಮುಖ್ಯ ಚುನಾವಣಾ ಅಧಿಕಾರಿ, ಜಿಲ್ಲಾ ಚುನಾವಣಾ ಅಧಿಕಾರಿ, ಮತದಾರರ ನೊಂದಣಿ ಅಧಿಕಾರಿ ಮತ್ತು ಬೂತ್ ಮಟ್ಟದ ಅಧಿಕಾರಿಗಳ ಮೊಬೈಲ್ ನಂಬರ್‌ಗಳನ್ನೂ ಸಹ ಗೂಗಲ್ ಮ್ಯಾಪ್‌ನಲ್ಲಿ ಪಡೆಯಬಹುದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.