ADVERTISEMENT

ಗೋರ್ಖಾಲ್ಯಾಂಡ್: ಹೊಸ ಆಡಳಿತ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST

ಡಾರ್ಜಿಲಿಂಗ್ (ಪಿಟಿಐ): ಗೋರ್ಖಾಲ್ಯಾಂಡ್ ಆಡಳಿತ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲ 45 ಸ್ಥಾನಗಳನ್ನು ಗೆದ್ದ ಜಾರ್ಖಂಡ್ ಮುಕ್ತಿಮೋರ್ಚಾ (ಜೆಜಿಎಂ) ಸದಸ್ಯರು ಶನಿವಾರ ಪ್ರಮಾಣವಚನ ಸ್ವೀಕರಿಸಿ ಗುಡ್ಡಗಾಡು ರಾಜ್ಯದ ಆಡಳಿತದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು. 

ಹೊಸದಾಗಿ ಅಸ್ತಿತ್ವಕ್ಕೆ ಬಂದ ಸ್ವಾಯತ್ತ ಗೋರ್ಖಾಲ್ಯಾಂಡ್ ಅಭಿವೃದ್ಧಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಒಳ್ಳೆಯ ಆಡಳಿತ ನೀಡಿದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಗುಡ್ಡಗಾಡು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಹೇಳಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೊಸ ವಿಶ್ವವಿದ್ಯಾಲಯ ಸ್ಥಾಪನೆಯ ಭರವಸೆ ನೀಡಿದರು. ಸಣ್ಣ ಕೈಗಾರಿಕೆ ಸ್ಥಾಪನೆ, ಉದ್ಯೋಗ ಅವಕಾಶ, ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವ ಮೂಲಕ ದಾರ್ಜಿಲಿಂಗ್ ಅನ್ನು ಸಿಟ್ಜರ್ಲೆಂಡ್ ಮಾದರಿಯಲ್ಲಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವಂತೆ ಸಲಹೆ ಮಾಡಿದರು.  

ರಾಜ್ಯಪಾಲ ನಾರಾಯಣನ್, ಸಂಸದ ಜಸ್ವಂತ್ ಸಿಂಗ್, ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್, ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿಮಲ್ ಗುರಾಂಗ್ ಪಾಲ್ಗೊಂಡಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT