ADVERTISEMENT

ಗೋವಾ: ಹೆಲಿಕಾಪ್ಟರ್ ಅಪಘಾತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಪಣಜಿ / ನವದೆಹಲಿ (ಐಎಎನ್‌ಎಸ್/ಪಿಟಿಐ): ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಇಂಧನ ತುಂಬಿಸಿಕೊಳ್ಳಲು ಸೋಮವಾರ ಬೆಳಿಗ್ಗೆ ಪಣಜಿಯ ದಾಬೋಲಿಂ ನೌಕಾನೆಲೆಯಲ್ಲಿ ಇಳಿಯುತ್ತಿದ್ದಾಗ ಅಪಘಾತಕ್ಕೆ ಈಡಾಗಿದ್ದು, ಇಬ್ಬರು ಅಧಿಕಾರಿಗಳು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ನೌಕಾನೆಲೆಯಲ್ಲಿ ಹೆಲಿಕಾಪ್ಟರ್ ಇಳಿಯುತ್ತಿರುವಾಗ ಅದರ ರೋಟರ್ (ತಿರುಗುವ ರೆಕ್ಕೆ) ಮುರಿದುಬಿದ್ದಿದ್ದು, ಆನಂತರ ಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿತು ಎಂದು  ನೌಕಾಪಡೆಯ ಮೂಲಗಳು ತಿಳಿಸಿವೆ.
 
ದಾಬೋಲಿಂ ವಿಮಾನ ನಿಲ್ದಾಣವನ್ನು ನೌಕಾಪಡೆ ನಿರ್ವಹಿಸುತ್ತಿದ್ದರೂ ನಾಗರಿಕ ವಿಮಾನ ನಿಲ್ದಾಣಗಳು ಸಹ ಅಲ್ಲಿಂದಲೇ ಹಾರಾಟ ನಡೆಸುತ್ತವೆ. ಹಾಗಾಗಿ ಸೋಮವಾರ ಗೋವಾದಿಂದ ಹಾರಾಟ ನಡೆಸುವ ವಿಮಾನಗಳು ತುಸು ವಿಳಂಬವಾಗಿ ಹಾರಾಟ ಆರಂಭಿಸಿದವು.

ಈ ಅಪಘಾತದಲ್ಲಿ ಮೃತಪಟ್ಟವರಲ್ಲಿ ಇಬ್ಬರು ನೌಕಾಪಡೆಯ ಅಧಿಕಾರಿಗಳು. ಮೃತರನ್ನು ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ಡಿ. ಸಿಂಗ್, ಸಹಪೈಲಟ್ ಲೆಫ್ಟಿನೆಂಟ್ ರಾಹುಲ್ ತಿವಾರಿ ಮತ್ತು ಚೀಫ್ ಆರ್ಟಿಫಿಸರ್ ಹರೀಶ್‌ಕೃಷ್ಣನ್ ಎಂದು ಗುರುತಿಸಿರುವುದಾಗಿ ನೌಕಾಪಡೆಯ ಅಧಿಕಾರಿಯೊಬ್ಬರು ದೆಹಲಿಯಲ್ಲಿ ತಿಳಿಸಿದ್ದಾರೆ.

ಇದು ಈ ವರ್ಷ ನೌಕಾಪಡೆಯಲ್ಲಿ ಸಂಭವಿಸಿದ ಮೊದಲ ಹೆಲಿಕಾಪ್ಟರ್ ಅಪಘಾತ. ನೌಕಾಪಡೆಯಲ್ಲಿ ಶೇ 60ಕ್ಕೂ ಹೆಚ್ಚು ಹಳೆಯದಾದ ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ನೌಕಾಪಡೆ ಅವುಗಳನ್ನು ಬದಲಾಯಿಸಲು ಯೋಜನೆ ಹಾಕಿಕೊಂಡಿದೆ.  ಅವಳಿ ಎಂಜಿನ್ ಹೊಂದಿರುವ 56ಕ್ಕೂ ಹೆಚ್ಚು ವಿದೇಶಿ ಲಘು ಹೆಲಿಕಾಪ್ಟರ್ ತರಿಸಿಕೊಳ್ಳಲು ಕೆಲ ದಿನಗಳ ಹಿಂದೆ ನೌಕಾಪಡೆ ಟೆಂಡರ್ ಕರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.