ADVERTISEMENT

ಘರ್ಷಣೆ: ಒಬ್ಬನ ಸಾವು, ಮೂವರಿಗೆ ಗಾಯ

ನಾಗಾಲ್ಯಾಂಡ್, ಮೇಘಾಲಯ ವಿಧಾನಸಭೆ ಚುನಾವಣೆ

ಪಿಟಿಐ
Published 27 ಫೆಬ್ರುವರಿ 2018, 20:25 IST
Last Updated 27 ಫೆಬ್ರುವರಿ 2018, 20:25 IST
ಘರ್ಷಣೆ: ಒಬ್ಬನ ಸಾವು, ಮೂವರಿಗೆ ಗಾಯ
ಘರ್ಷಣೆ: ಒಬ್ಬನ ಸಾವು, ಮೂವರಿಗೆ ಗಾಯ   

ಕೋಹಿಮಾ: ನಾಗಾಲ್ಯಾಂಡ್ ವಿಧಾನಸಭೆಗೆ ಮಂಗಳವಾರ ನಡೆದ ಚುನಾವಣೆ ವೇಳೆ ಆಡಳಿತಾರೂಢ ಎನ್‌ಪಿಎಫ್ ಹಾಗೂ ಎನ್‌ಡಿಪಿಪಿ ಬೆಂಬ
ಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ.

‘ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಹಾಗೂ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್‌ಡಿಪಿಪಿ) ಬೆಂಬಲಿಗರ ನಡುವೆ ಅಕುಲುಟೊ ಕ್ಷೇತ್ರದಲ್ಲಿ ಬೆಳಿಗ್ಗೆ 11.10ಕ್ಕೆ ಗಲಾಟೆ ನಡೆದಿದೆ’ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅಭಿಜಿತ್ ಸಿನ್ಹಾ ತಿಳಿಸಿದ್ದಾರೆ. ಮತದಾನಕ್ಕೆ ‌ಅಡ್ಡಿಯಾಗಿಲ್ಲ.

ಈ ಕ್ಷೇತ್ರದಲ್ಲಿ ಎನ್‌ಪಿಎಫ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಬಿಜೆ‍ಪಿ ಹಾಗೂ ಎನ್‌ಡಿಪಿಪಿ ಮೈತ್ರಿ ಮಾಡಿಕೊಂಡಿವೆ.

ADVERTISEMENT

ಬಾಂಬ್ ಸ್ಫೋಟ: ‘ಮಾನ್ ಜಿಲ್ಲೆಯ ಟಿಜಿತ್ ಗ್ರಾಮದ ಮತಗಟ್ಟೆ ಬಳಿ ಮತದಾನ ಆರಂಭಕ್ಕೂ ಒಂದು ಗಂಟೆ ಮುನ್ನ ಬಾಂಬ್ ಸ್ಫೋಟದ ವರದಿಯಾಗಿದೆ. ಸ್ಫೋಟದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರಿಗೆ ಗಾಯವಾಗಿದೆ’ ಎಂದು ಸಿನ್ಹಾ ತಿಳಿಸಿದ್ದಾರೆ.

ಬದಲಿ ಇವಿಎಂ: ‘ಸಮರ್ಪಕವಾಗಿ ಕೆಲಸ ಮಾಡದ 107 ವಿದ್ಯುನ್ಮಾನ ಮತದಾನ ಯಂತ್ರಗಳನ್ನು (ಇವಿಎಂ) ಬದಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ಮಾರ್ಚ್ 3ರಂದು ಮತ ಎಣಿಕೆ ನಡೆಯಲಿದೆ.

ನಾಗಾಲ್ಯಾಂಡ್‌ ಶೇ 75 ಮತದಾನ

‘ನಾಗಾಲ್ಯಾಂಡ್‌ನಲ್ಲಿ ಶೇ 75 ಮತದಾನ ನಡೆದಿದೆ’ ಎಂದು ಚುನಾವಣಾ ಅಧಿಕಾರಿ ಸುದೀಪ್ ಜೈನ್ ತಿಳಿಸಿದ್ದಾರೆ. ಕಳೆದ ಬಾರಿ ಇಲ್ಲಿ ಶೇ 90ರಷ್ಟು ಮತದಾನ ಆಗಿತ್ತು.

‘ಮೇಘಾಲಯದಲ್ಲಿ ಸಂಜೆ 4 ಗಂಟೆವರೆಗೆ ಶೇ 67ರಷ್ಟು ಮತದಾನ ನಡೆದಿದೆ. ಮತದಾನ ಶಾಂತಿಯುತವಾಗಿತ್ತು’ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಎಫ್.ಆರ್. ಖಾರ್ಕೊಂಗೊರ್ ತಿಳಿಸಿದ್ದಾರೆ. 2013ರಲ್ಲಿ ಶೇ 88 ಮತದಾನ ನಡೆದಿತ್ತು.

‘ಎರಡೂ ರಾಜ್ಯಗಳಲ್ಲಿ ಮತದಾನ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.