ನವದೆಹಲಿ: ಹಿರಿಯ ಬಿಜೆಪಿ ನಾಯಕರ ನಡುವೆ ನಡೆದಿರುವ ಶೀತಲ ಸಮರದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಟಿಕೆಟ್ ತಡೆ ಹಿಡಿಯಲಾಗಿದೆ.ಬಿಜೆಪಿ ಚುನಾವಣಾ ಸಮಿತಿ ಶನಿವಾರ ರಾತ್ರಿ ವಾರಾಣಸಿ ಸೇರಿ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತು. ಆದರೆ, ಬಳ್ಳಾರಿಯಿಂದ ಕಣಕ್ಕಿಳಿಯಲು ಉದ್ದೇಶಿಸಿರುವ ಶ್ರೀರಾಮುಲು ಅವರ ಹೆಸರನ್ನು ಇನ್ನು ಅಧಿಕೃತವಾಗಿ ಪ್ರಕಟಿಸಲಿಲ್ಲ.
ಶ್ರೀರಾಮುಲು ಸ್ಪರ್ಧೆಗೆ ಹಿರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅರುಣ್ ಜೇಟ್ಲಿ ಮಾಜಿ ಸಚಿವರಿಗೆ ಬೆಂಬಲವಾಗಿದ್ದಾರೆ.. ರಾಜ್ಯ ಬಿಜೆಪಿ ಶ್ರೀರಾಮುಲು ಅವರಿಗೆ ಟಿಕೆಟ್ ನೀಡುವುದಕ್ಕೆ ಒಪ್ಪಿಗೆ ನೀಡಿದೆ. ಬಳ್ಳಾರಿಯಿಂದ ಶ್ರೀರಾಮುಲು ಹೆಸರನ್ನು ಈಗಾಗಲೇ ಅಂತಿಮಗೊಳಿಸಿದ್ದು, ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.
ಈ ಹಂತದಲ್ಲಿ ಸುಷ್ಮಾ ಸ್ವರಾಜ್ ಕ್ಯಾತೆ ತೆಗೆದಿದ್ದಾರೆ. ತಮ್ಮ ಪ್ರಬಲ ವಿರೋಧದ ನಡುವೆಯೂ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಬಳ್ಳಾರಿಯಿಂದ ಟಿಕೆಟ್ ನೀಡಲಾಗುತ್ತಿದೆ ಎಂದು ಶುಕ್ರವಾರ ರಾತ್ರಿ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಹಿರಿಯ ನಾಯಕ ಅರುಣ್ ಜೇಟ್ಲಿ ಶನಿವಾರ ತಮ್ಮ ಬ್ಲಾಗ್‌ನಲ್ಲಿ ಸುಷ್ಮಾ ಅವರಿಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಚುನಾವಣಾ ಸಮಿತಿಯ ಮುಂದಿನ ಸಭೆಯಲ್ಲಿ ಶ್ರೀರಾಮುಲು ವಿಷಯ ಚರ್ಚೆಗೆ ಬರಲಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.