ADVERTISEMENT

ಚಕ್ರವರ್ತಿ ಅಕ್ಬರ್‌ ಪತ್ನಿ ಜೋಧಾಬಾಯಿ ಪೋರ್ಚುಗೀಸ್‌ ಮಹಿಳೆ, ರಜಪೂತ ರಾಣಿಯಲ್ಲ!

ಏಜೆನ್ಸೀಸ್
Published 3 ಏಪ್ರಿಲ್ 2017, 20:38 IST
Last Updated 3 ಏಪ್ರಿಲ್ 2017, 20:38 IST
ಜೋಧಾಅಕ್ಬರ್‌ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್‌
ಜೋಧಾಅಕ್ಬರ್‌ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್‌   

ಪಣಜಿ: ಜಹಂಗೀರನ ತಾಯಿ ಮತ್ತು ಚಕ್ರವರ್ತಿ ಅಕ್ಬರ್‌ನ ಪತ್ನಿಯರಲ್ಲಿ ಒಬ್ಬರೆಂದು ಇತಿಹಾಸದಲ್ಲಿ ಉಲ್ಲೇಖಗೊಂಡಿರುವ ಜೋಧಾಬಾಯಿ ರಜಪೂತ ರಾಣಿಯಲ್ಲ. ಆಕೆ ಪೋರ್ಚುಗೀಸ್‌ ಮಹಿಳೆ ಎಂದು ಹೊಸ ಪುಸ್ತಕ ಪ್ರತಿಪಾದಿಸಿದೆ.

ಗೋವಾ ಮೂಲದ ಲೇಖಕ ಲೂಯಿಸ್‌ ಡೆ ಆಸಿಸ್‌ ಕೊರೀಯಾ ‘ಪೋರ್ಚುಗೀಸ್‌ ಇಂಡಿಯಾ ಆ್ಯಂಡ್‌ ಮೊಘಲ್‌ ರಿಲೇಷನ್ಸ್‌ 1510–1735’ ಪುಸ್ತಕದ ಮೂಲಕ ತೆರೆದಿಟ್ಟಿರುವ ಜೋಧಾಬಾಯಿಯ ರಹಸ್ಯ ಚರ್ಚೆಗೆ ಗ್ರಾಸವಾಗಿದೆ.

ಜೋಧಾಬಾಯಿಯು ಪೋರ್ಚುಗೀಸ್‌ ಮಹಿಳೆ ಡೋನಾ ಮಾರಿಯಾ ಮಸ್ಕರೆನ್ಹಾಸ್‌. 1500ರ ಮಧ್ಯಭಾಗ, ಅರಬಿ ಸಮುದ್ರ ಮಾರ್ಗದಲ್ಲಿ ಪೋರ್ಚುಗೀಸ್‌ ಸೇನೆಯೊಂದಿಗೆ ಡೋನಾ ಮಾರಿಯಾ ಪ್ರಯಾಣಿಸುತ್ತಿದ್ದಾಗ ಗುಜರಾತ್‌ನ ಸುಲ್ತಾನ್‌ ಬಹದ್ದೂರ್‌ ಷಾ ಪಡೆಯುವ ಸೆರೆ ಹಿಡಿಯುತ್ತದೆ.

ADVERTISEMENT

ಡೋನಾ ಮಾರಿಯಾ ಮತ್ತು ಆಕೆಯ ತಂಗಿ ಜೂಲಿಯಾನ ಕೂಡ ಸೆರೆಯಾಗುತ್ತಾರೆ. ಸುಲ್ತಾನ್ ಬಹದ್ದೂರ್‌ ಷಾ ಇವರನ್ನು ಯುವ ಚಕ್ರವರ್ತಿ ಅಕ್ಬರನಿಗೆ ಉಡುಗೊರೆಯಾಗಿ ನೀಡುತ್ತಾರೆ.

ಅದಾಗಲೇ ವಿವಾಹವಾಗಿದ್ದ 18 ವರ್ಷ ವಯಸ್ಸಿನ ದೊರೆ ಅಕ್ಬರ್‌ಗೆ ಡೋನಾ ಮಾರಿಯಾ ಮೇಲೆ ಪ್ರೇಮಾಂಕುರವಾಗುತ್ತದೆ. ಡೋನಾ ಆಗ 17 ವರ್ಷದ ತರುಣಿ. ಡೋನಾಳನ್ನು ಕಂಡೊಡನೆ ‘ಈ ತರುಣಿ ನನಗೆ’ ಎಂದುಬಿಡುತ್ತಾನೆ. ಸಹೋದರಿಯರು ಆಸ್ಥಾನದ ಹೆಂಗಳರೆಯರಿರುವ ಜಾಗದಲ್ಲಿ ಉಳಿಯುತ್ತಾರೆ ಎಂದು ಲೇಖಕ ಕೊರೀಯಾ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಐಎಎನ್‌ಎಸ್‌ ಸುದ್ದಿ ಸಂಸ್ಥೆಗೆ ವಿವರ ನೀಡಿದ್ದಾರೆ.

ಮೊಘಲರ ಆಸ್ಥಾನದಲ್ಲಿ ಪೋರ್ಚುಗೀಸ್‌ ಮಹಿಳೆಯರು ಬದುಕು ಸಾಗಿಸುತ್ತಿದ್ದಾರೆ ಎಂಬುದನ್ನು ಪೋರ್ಚುಗೀಸರು ಮತ್ತು ಕ್ಯಾಥೋಲಿಕರು ಒಪ್ಪುವ ಮನಸ್ಸು ಮಾಡಲಿಲ್ಲ. ಇನ್ನೂ ಪರದೇಶೀಯಳನ್ನು ಚಕ್ರವರ್ತಿಯ ಪತ್ನಿಯಾಗಿ ಸ್ವೀಕರಿಸಲು ಮೊಘಲರು ಇಷ್ಟಪಡಲಿಲ್ಲ.

‘ಜೋಧಾಬಾಯಿ’ ಅಕ್ಬರ್‌ ಹಾಗೂ ಜಹಂಗೀರ್‌ ಬರಹಗಳಲ್ಲಿ ಎಲ್ಲಿಯೂ ಉಲ್ಲೇಖಿತಳಾಗಿಲ್ಲ. ಆ ಕಾಲದ ಬ್ರಿಟಿಷ್‌ ಮತ್ತು ಮೊಘಲ್ ಇತಿಹಾಸಕಾರರು ಜೋಧಾಬಾಯಿಯನ್ನು ಸೃಷ್ಟಿಸಿದರು ಎಂದಿದ್ದಾರೆ.

ಡೋನಾ ಮಾರಿಯಾ ಜಹಂಗೀರನ ತಾಯಿಯಾಗಿ ಮರ್ಯುಮ್‌–ಉಲ್‌–ಜಮಾನಿಯಾಗಿ ಕಾಣಿಸಿಕೊಂಡಿದ್ದು, ಅವರೇ ಜನರ ಬಾಯಿಯಲ್ಲಿರುವ ಜೋಧಾಬಾಯಿ ಅಥವಾ ಹರ್ಕಾಬಾಯಿ ಎನ್ನುವುದನ್ನು 173 ಪುಟಗಳ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. 

ಆದರೆ, ಮೊಘಲರ ಇತಿಹಾಸದಲ್ಲಿ ಜಹಂಗೀರನ ತಾಯಿಯ ಹೆಸರನ್ನು ಉಲ್ಲೇಖಿಸದಿರುವುದು ಯಕ್ಷ ಪ್ರಶ್ನೆ ಎಂದಿದ್ದಾರೆ ಲೇಖಕ ಕೊರೀಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.