ADVERTISEMENT

ಚಳಿಗಾಲದ ಅಧಿವೇಶನದವರೆಗೆ ಅಣ್ಣಾ ಗಡುವು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2011, 19:30 IST
Last Updated 4 ನವೆಂಬರ್ 2011, 19:30 IST
ಚಳಿಗಾಲದ ಅಧಿವೇಶನದವರೆಗೆ ಅಣ್ಣಾ ಗಡುವು
ಚಳಿಗಾಲದ ಅಧಿವೇಶನದವರೆಗೆ ಅಣ್ಣಾ ಗಡುವು   

ನವದೆಹಲಿ, (ಪಿಟಿಐ): ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಜನ ಲೋಕಪಾಲ ಮಸೂದೆಯನ್ನು ಅಂಗೀಕರಿಸದಿದ್ದರೆ ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುವುದಾಗಿ ಅಣ್ಣಾ ಹಜಾರೆ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

ರಾಜ್‌ಘಾಟ್‌ನಲ್ಲಿ ಬೆಳಿಗ್ಗೆ ತಮ್ಮ 19 ದಿನಗಳ ಮೌನವ್ರತವನ್ನು ಮುರಿದ ಅವರು, ಜನಲೋಕಪಾಲ ಮಸೂದೆಯನ್ನು ಅಂಗೀಕರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಏಕೆ ಪುನಃ ಆಯ್ಕೆ ಮಾಡಬೇಕು ಎಂದು ಜನರನ್ನು ಕೇಳುತ್ತೇನೆ ಎಂದು ಹೇಳಿದರು.

ಮುಂಬರುವ ಚುನಾವಣೆಯಲ್ಲಿ ಯಾವುದೇ ಪಕ್ಷದ ಹೆಸರು ಪ್ರಸ್ತಾಪ ಮಾಡಬಾರದು ಎಂದು ಮೊದಲು ನಿರ್ಧರಿಸಿದ್ದೆ. ಆದರೆ ಕೇಂದ್ರ ಸರ್ಕಾರ ಜನ ಲೋಕಪಾಲ ಮಸೂದೆಯನ್ನು ಹಗುರವಾಗಿ ಪರಿಗಣಿಸಿ ಈ ಮಸೂದೆಯನ್ನು ಅನೇಕ ಭಾಗಗಳನ್ನಾಗಿ ಮಾಡಿ ದುರ್ಬಲಗೊಳಿಸಿದೆ. ಆದ್ದರಿಂದ ನನ್ನ ಮೊದಲಿನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅಣ್ಣಾ ತಿಳಿಸಿದರು.

ಚಳಗಾಲದ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ನಾನು ಮತ್ತು ನನ್ನ ತಂಡದ ಸದಸ್ಯರು, ಚುನಾವಣೆ ನಡೆಯಲಿರುವ ಎಲ್ಲಾ ಐದು ರಾಜ್ಯಗಳಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.

ನಮ್ಮ ತಂಡ ಬಿಜೆಪಿ ಪರ ಪ್ರಚಾರ ಮಾಡುವುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹೇಳಿಕೊಳ್ಳುವಂತಹ ವ್ಯತ್ಯಾಸವೇನೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಉತ್ತರಾಖಂಡ ಸರ್ಕಾರ ಸಿದ್ಧಪಡಿಸಿರುವ ಲೋಕಾಯುಕ್ತ ಮಸೂದೆಯನ್ನು ನೋಡಿಯಾದರೂ ಕೇಂದ್ರ ಪಾಠ ಕಲಿಯಬೇಕಿತ್ತು. ಆದರೆ ಅದಕ್ಕೆ ತದ್ವಿರುದ್ಧವಾದ ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಟೀಕಿಸಿದರು.

ಪರಿಣಾಮಕಾರಿ ಲೋಕಾಯುಕ್ತ ಮಸೂದೆ ರಚನೆಗೆ ಕಾರಣರಾದ ಉತ್ತರಾಖಂಡದ ಮುಖ್ಯಮಂತ್ರಿ ಬಿ.ಸಿ.ಖಂಡೂರಿ ಅವರನ್ನು ತಾವು ಸಾರ್ವಜನಿಕ ಸಮಾರಂಭದಲ್ಲಿ ಸನ್ಮಾನಿಸುವುದಾಗಿ ತಿಳಿಸಿದರು. ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗದಿದ್ದರೆ ಅಧಿವೇಶನದ ಕೊನೆಯ ಮೂರು ದಿನಗಳ ಕಾಲ ತಾವು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ದೇಶದಾದ್ಯಂತ ಪ್ರವಾಸ ಮಾಡುವುದಾಗಿ ಅವರು ಘೋಷಿಸಿದರು.

ತಮ್ಮ ತಂಡ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿದ್ದರಿಂದ ಹಿಸ್ಸಾರ್ ಕ್ಷೇತ್ರದ ಉಪಚುನಾವಣೆಯಲ್ಲಿ ಸೋತಿರುವುದನ್ನು ಆ ಪಕ್ಷ ಮರೆಯಬಾರದು ಎಂದ ಅಣ್ಣಾ, ತಮ್ಮ ಉದ್ದೇಶ ಸರ್ಕಾರವನ್ನು ಅಸ್ಥಿರಗೊಳಿಸುವುದಲ್ಲ, ಜನ ಲೋಕಪಾಲ ಮಸೂದೆ ಅಂಗೀಕಾರವಾಗುವವರೆಗೆ ಹೋರಾಡುವುದು ಎಂದು ಸಮರ್ಥಿಸಿಕೊಂಡರು.

ಮಸೂದೆ ಅಂಗೀಕಾರವಾಗದಿದ್ದರೆ ಚಳವಳಿಯನ್ನು ಪುನಃ ಆರಂಭಿಸುವುದಾಗಿ ಪ್ರಧಾನಿಗೆ ಪತ್ರ ಬರೆದು ಬೆದರಿಕೆ ಹಾಕಿರುವ ಬಗ್ಗೆ ಕೇಳಿದಾಗ, ಅದು ಬೆದರಿಕೆಯ ಪತ್ರವಲ್ಲ, ನೆನಪಿನೋಲೆ ಎಂದು ಹೇಳಿದರು.

ಪೆಟ್ರೋಲ್ ಬೆಲೆ ಏರಿಕೆಗೆ ಟೀಕೆ: `ಪೆಟ್ರೋಲ್ ಬೆಲೆಯನ್ನು  ಪದೆಪದೇ ಏರಿಸುತ್ತಿರುವುದರಿಂದ ಜನ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ತೈಲ ಕಂಪೆನಿಗಳು ಮತ್ತು ಸರ್ಕಾರದ ಮಧ್ಯೆ ಅಕ್ರಮ ವ್ಯವಹಾರವಿದೆ. ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ನಡುವೆಯೂ ಸಂಬಂಧವಿದೆ~ ಎಂದು ಅಣ್ಣಾ ಆರೋಪಿಸಿದರು.

`ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದ್ದಾರೆ~:  ಲೋಕ ಪಾಲ್ ಮಸೂದೆ ಬಗ್ಗೆ ನೀಡುತ್ತಿರುವ ದ್ವಂದ್ವ ಹೇಳಿಕೆಗಳಿಂದಾಗಿ ಅಣ್ಣಾ ಹಜಾರೆ ಅವರು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಅಣ್ಣಾ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿದರೆ ಅದು ಯಾವುದೇ ಪರಿಣಾಮ ಬೀರುವುದಿಲ್ಲ. ಪಕ್ಷಗಳ ಬಗ್ಗೆ ಮಾತನಾಡುವಾಗ ಅವರು ಪ್ರತಿದಿನ ನಿಲುವು ಬದಲಾಯಿಸುತ್ತಿರುವುದರಿಂದ ತಾವಾಗಿಯೇ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಬ್ಲಾಕ್‌ಮೇಲ್ ಮಾಡಬೇಡಿ: ಕಾಂಗ್ರೆಸ್ ತಾಕೀತು
ನವದೆಹಲಿ, (ಐಎಎನ್‌ಎಸ್):
ಸರ್ಕಾರಕ್ಕೆ ಬೆದರಿಕೆ ಹಾಕುವುದು ಮತ್ತು ಪ್ರತಿ ಹಂತದಲ್ಲೂ ಅದನ್ನು ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಪಕ್ಷ ಅಣ್ಣಾ ಹಜಾರೆ ಅವರಿಗೆ ತಿಳಿಸಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಜನ ಲೊಕಪಾಲ ಮಸೂದೆಯನ್ನು ಅಂಗೀಕರಿಸದಿದ್ದಲ್ಲಿ  ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಲಾಗುವುದು ಎಂಬ ಅಣ್ಣಾ ಅವರ ಹೇಳಿಕೆಗೆ ಪಕ್ಷ ಹೀಗೆ ಪ್ರತಿಕ್ರಿಯಿಸಿದೆ.

`ನಾವು ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಜನರಿಗೆ ಮತ್ತು ಹಜಾರೆ ಅವರಿಗೆ ಪದೇಪದೇ ಭರವಸೆ ನೀಡುತ್ತಾ ಇರಲು ಸಾಧ್ಯವಿಲ್ಲ. ಪ್ರಬಲ ಲೋಕಪಾಲ ಮಸೂದೆ ತರುವ ಬಗ್ಗೆ ಸರ್ಕಾರ ಈಗಾಗಲೇ ಭರವಸೆ ನೀಡಿದೆ. ಅದರಂತೆ ನಡೆದುಕೊಳ್ಳುತ್ತದೆ~ ಎಂದು ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧರಿ ಹೇಳಿದ್ದಾರೆ.

ಇಂತಹ ಒತ್ತಡ ತಂತ್ರಗಳಿಗೆ ಸರ್ಕಾರ ಮಣಿಯುವುದಿಲ್ಲ ಮತ್ತು ಈ ರೀತಿ ಒತ್ತಡ ಹೇರುವುದು ಘನತೆಗೆ ತಕ್ಕುದಲ್ಲ ಎಂದು ಅವರು ಪರೋಕ್ಷವಾಗಿ ಅಣ್ಣಾ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.

ಬ್ಲಾಕ್‌ಮೇಲ್ ಅಲ್ಲ: `ಸಮಾಜದ ಯಾವುದೇ ವರ್ಗ ಬೇಡಿಕೆ ಮಂಡಿಸುವ ಹಕ್ಕು ಹೊಂದಿದೆ. ಅದನ್ನು ಬ್ಲಾಕ್‌ಮೇಲ್ ಎಂದು ಹೇಳುವುದು ತಪ್ಪಾಗುತ್ತದೆ~ ಎಂದು ಬಿಜೆಪಿ ವಕ್ತಾರ ಬಲಬೀರ್ ಪುಂಜ್ ಹೇಳಿದ್ದಾರೆ.

`ಬಾಬಾ ಗತಿಯೇ  ಆಗುತ್ತಿತ್ತು~
ಪಣಜಿ (ಪಿಟಿಐ):
ಅಣ್ಣಾ ಹಜಾರೆ ಅವರು ರಾಮ್‌ಲೀಲಾ ಮೈದಾನದಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹದ ವೇಳೆ ತಮ್ಮ ಪಕ್ಷ ಮಧ್ಯಪ್ರವೇಶಿಸಿ ಬೆಂಬಲ ಸೂಚಿಸದೇ ಇದ್ದರೆ ಬಾಬಾ ರಾಮ್‌ದೇವ್ ಮತ್ತು ಅವರ ಬೆಂಬಲಿಗರಿಗೆ ಆದ ಗತಿಯೇ ಅಣ್ಣಾ ಅವರಿಗೂ ಆಗುತ್ತಿತ್ತು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

ಬಿಜೆಪಿಗೆ ರಾಷ್ಟ್ರದ ಹಿತಾಸಕ್ತಿಯಲ್ಲಿ ಆಸಕ್ತಿ ಇದ್ದದ್ದರಿಂದಲೇ ಅದು ಅಣ್ಣಾ ಅವರಿಗೆ ಬೆಂಬಲ ನೀಡಿತ್ತು. ಅವರಿಗೆ ಬೆಂಬಲ ನೀಡಿದ ಮೊದಲ ರಾಜಕೀಯ ಪಕ್ಷ ಬಿಜೆಪಿ.  ನಾವು ಅಣ್ಣಾ ಅವರಿಗೆ ಬೆಂಬಲ ಸೂಚಿಸಿ ಪತ್ರ ಕೊಡುವವರೆಗೂ ಬಿಜೆಪಿ ಅವರ ಜೊತೆ ಇಲ್ಲ ಎಂದೇ ಕಾಂಗ್ರೆಸ್ ಹೇಳುತ್ತಿತ್ತು. ಅದರ ಮುಖ್ಯ ಕಾರ್ಯತಂತ್ರ ಅಣ್ಣಾ ಚಳವಳಿಯನ್ನು ಮುಗಿಸುವುದೇ ಆಗಿತ್ತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.