ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಗೃಹಸಚಿವ ಪಿ.ಚಿದಂಬರಂ ಅವರ ಪಾತ್ರದ ಬಗ್ಗೆ ತನಿಖೆ ನಡೆಸಬೇಕೆಂಬ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ಕೈಗೆತ್ತಿಕೊಂಡಿದ್ದು, ಚಿದಂಬರಂ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಎರಡನೇ ತಲೆಮಾರಿನ ತರಂಗಾಂತರ ಹಂಚಿಕೆ ಬಗೆಗೆ ಅದರ ಮೌಲ್ಯ ನಿರ್ಧಾರದ ಬಗೆಗೆ ಆಗ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರಿಗೆ ಸಂಪೂರ್ಣ ಅರಿವಿತ್ತು ಎಂದು ಆರೋಪಿಸಿರುವ ಸರ್ಕಾರೇತರ ಸಂಸ್ಥೆಯೊಂದು ಚಿದು ವಿರುದ್ಧ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ವಾದಿಸಿದೆ.
ಇದೇ ರೀತಿಯ ಅರ್ಜಿಯನ್ನು ಜನತಾಪಕ್ಷದ ಸುಬ್ರಮಣಿಯನ್ ಸ್ವಾಮಿ ಅವರೂ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಹಾಗೂ ಎಸ್. ರಾಧಾಕೃಷ್ಣನ್ ಅವರು ಸರ್ಕಾರೇತರ ಸಂಸ್ಥೆಯ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿ ಸಿಬಿಐ, ಆದಾಯ ತೆರಿಗೆ ಇಲಾಖೆ ಹಾಗೂ ಜಾಗೃತ ದಳಕ್ಕೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿತು.
ಈಗಾಗಲೇ ವಿಚಾರಣಾ ನ್ಯಾಯಾಲಯವು 2 ಜಿ ತರಂಗಾಂತರ ಹಂಚಿಕೆ ಹಗರಣದಿಂದ ಚಿದು ಅವರನ್ನು ಆರೋಪಮುಕ್ತಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.