ADVERTISEMENT

ಚಿನ್ನ-ಬೆಳ್ಳಿ ದಾಖಲೆ ಕುಸಿತ

ರೂ 1,250 ಇಳಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 20:29 IST
Last Updated 13 ಏಪ್ರಿಲ್ 2013, 20:29 IST

ನವದೆಹಲಿ(ಪಿಟಿಐ): ದೇಶದ ಚಿನಿವಾರ ಪೇಟೆಯಲ್ಲಿ ಶನಿವಾರ ಅಕ್ಷರಶಃ ತಲ್ಲಣ. ಚಿನ್ನ-ಬೆಳ್ಳಿ ಧಾರಣೆ ಸಾರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿತು.

ಅಂತರರಾಷ್ಟ್ರೀಯ ಮಾರುಕಟ್ಟೆ ಅಸ್ಥಿರತೆಯಿಂದಾಗಿ ಸ್ಟ್ಯಾಂಡರ್ಡ್ ಚಿನ್ನದ ಧಾರಣೆ ಇಲ್ಲಿ 10 ಗ್ರಾಂಗೆ ಒಂದೇ ದಿನದಲ್ಲಿ ರೂ 1,250 ತಗ್ಗಿದೆ. ಬಂಗಾರದ ಮೌಲ್ಯ ವರ್ಷದ ಹಿಂದಿನ ಮಟ್ಟ(ರೂ28,300)ಕ್ಕೆ ಜಾರಿದೆ. ಬೆಳ್ಳಿ ದರವೂ ಕೆ.ಜಿಗೆ ರೂ2,500 ಕುಸಿದು ರೂ50,100ಕ್ಕೆ ಬಂದಿದೆ.

ಮುಂಬೈನಲ್ಲಿಯೂ 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ 27,880ಕ್ಕೆ, ಅಪರಂಜಿ ಚಿನ್ನ ರೂ 28,015ಕ್ಕೆ ಇಳಿಯಿತು. ಕೆ.ಜಿ ಸಿದ್ಧ ಬೆಳ್ಳಿ ದರ ರೂ 50,605ಕ್ಕೆ ಬಂದಿತು.

ಮುಂಬರುವ ದಿನಗಳಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತೀವ್ರವಾಗಿ ಕುಸಿಯಲಿದೆ ಎಂಬ ವಿಶ್ಲೇಷಣೆಯಿಂದ ದಿಕ್ಕೆಟ್ಟ ಹೂಡಿಕೆದಾರರು ಒಮ್ಮೆಲೇ ಮಾರಾಟಕ್ಕೆ ಮುಗಿಬಿದ್ದಿದ್ದರಿಂದ ಸಾರ್ವಕಾಲಿಕ ಕುಸಿತವಾಯಿತು. ನ್ಯೂಯಾರ್ಕ್ ಸೇರಿದಂತೆ ಅಂತರರಾಷ್ಟ್ರೀಯ ಚಿನಿವಾರ ಪೇಟೆಯಲ್ಲಿ ಔನ್ಸ್ ಚಿನ್ನ 84 ಡಾಲರ್ ಕುಸಿದು 1,477 ಡಾಲರ್‌ಗೆ ಬಂದಿತು. 2012ರ ಏ. 7ರಂದೂ ಇಷ್ಟೇ ಧಾರಣೆ ಇತ್ತು.

ಇನ್ನಷ್ಟು ಕುಸಿತ ಸಾಧ್ಯತೆ
ವಾಯಿದಾ ಮಾರುಕಟ್ಟೆ ಸಟ್ಟಾ ವ್ಯಾಪಾರದಿಂದ (ಊಹಾತ್ಮಕ) ಹೂಡಿಕೆದಾರರು ಬಹಳ ಗೊಂದಲದಲ್ಲಿದ್ದಾರೆ. ಈಗಿನ ವಾತಾವರಣವನ್ನು ಗಮನಿಸಿದರೆ ಚಿನ್ನದ ಧಾರಣೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂಬುದು `ಅಖಿಲ ಭಾರತ ಚಿನ್ನಾಭರಣ ಮಾರಾಟಗಾರರ ಸಂಘ'ದ ಉಪಾಧ್ಯಕ್ಷ ಸುಧೀಂದರ್ ಜೈನ್ ಅವರ ವಿಶ್ಲೇಷಣೆ.

`ವಾಯಿದಾ ವಹಿವಾಟು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ನಡೆ ಆಧರಿಸಿಯೇ ದೇಶೀಯ ಚಿನಿವಾರ ಪೇಟೆ ಧಾರಣೆಯೂ ನಿರ್ಧಾರವಾಗುತ್ತದೆ. ಐದು ತಿಂಗಳ ನಂತರ ನವರಾತ್ರಿ ಬರಲಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸುವುದು ಶುಭ ಎಂಬ ಭಾವನೆ ಜನರಲ್ಲಿದೆ. ಆಗ ಚಿನ್ನಕ್ಕೆ ಮತ್ತೆ ಬೇಡಿಕೆ ಹೆಚ್ಚುತ್ತದೆ, ಧಾರಣೆಯೂ ಏರುತ್ತದೆ' ಎಂಬುದು ಮಾರುಕಟ್ಟೆ ತಜ್ಞರು, ಚಿಲ್ಲರೆ ವ್ಯಾಪಾರಿಗಳ ವಿಶ್ವಾಸದ ನುಡಿ.

`ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿಯೂ 10ಗ್ರಾಂ ಚಿನ್ನದ ದರ ಶನಿವಾರ ರೂ27,600ಕ್ಕೆ ಕುಸಿದು 13 ತಿಂಗಳ ಹಿಂದಿನ ಮಟ್ಟ ತಲುಪಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT