ನವದೆಹಲಿ (ಐಎಎನ್‌ಎಸ್): ಚೀನಾ ಅಧ್ಯಕ್ಷ ಹೂ ಜಿಂಟಾವೊ ಅವರ ಮುಂಬರುವ ಭಾರತ ಭೇಟಿ ಪ್ರತಿಭಟಿಸಿ ಟಿಬೆಟನ್ ಮೂಲದ ಯುವಕನೊಬ್ಬ ಆತ್ಮಾಹುತಿಗೆ ಯತ್ನಿಸಿದ ಘಟನೆ ಸೋಮವಾರ ಇಲ್ಲಿ ನಡೆದಿದೆ.
ಯುವಕನನ್ನು 27 ವರ್ಷದ ಜಾಂಫೆಲ್ ಯೆಶಿ ಎಂದು ಗುರುತಿಸಲಾಗಿದೆ. ಈತ ಉತ್ತರ ದೆಹಲಿಯ ಮಜ್ನು ಕಾ ತಿಲಾ ಪ್ರದೇಶದ ನಿವಾಸಿ. ಜಿಂಟಾವೊ ಭಾರತ ಭೇಟಿ ಪ್ರತಿಭಟಿಸಿ ರಾಜಧಾನಿಯ ಜಂತರ್ ಮಂತರ್‌ನಲ್ಲಿ 100ಕ್ಕೂ ಹೆಚ್ಚು ಟಿಬೆಟನ್ನರು ಮಧ್ಯಾಹ್ನ 12.40ರ ವೇಳೆ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಯೆಶಿ ಮೈಮೇಲೆ ಎಣ್ಣೆ ಹಾಕಿಕೊಂಡು, ಬೆಂಕಿ ಹಚ್ಚಿಕೊಂಡಿದ್ದ. ಧಗಧಗನೆ ದೇಹಕ್ಕೆ ಬೆಂಕಿ ಹಚ್ಚಿಕೊಂಡು ಜನರತ್ತ ಧಾವಿಸುತ್ತಿದ್ದ ಆತ ಕೆಳಗೆ ಉರುಳಿ ಬಿದ್ದಿದ್ದಾನೆ. ದೇಹದ ಶೇ 90ರಷ್ಟು ಭಾಗ ಸುಟ್ಟು ಕರಕಲಾಗಿರುವ ಈತನನ್ನು ಇಲ್ಲಿನ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮಾರ್ಚ್ 28ರಂದು ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷರು ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.