ADVERTISEMENT

ಚುನಾವಣಾ ಅಕ್ರಮ ದಾವೆ: ಚಿದಂಬರಂ ವಿರುದ್ಧ ವಿಚಾರಣೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2012, 19:30 IST
Last Updated 7 ಜೂನ್ 2012, 19:30 IST
ಚುನಾವಣಾ ಅಕ್ರಮ ದಾವೆ: ಚಿದಂಬರಂ ವಿರುದ್ಧ ವಿಚಾರಣೆಗೆ ಆದೇಶ
ಚುನಾವಣಾ ಅಕ್ರಮ ದಾವೆ: ಚಿದಂಬರಂ ವಿರುದ್ಧ ವಿಚಾರಣೆಗೆ ಆದೇಶ   

ಮದುರೆ (ಪಿಟಿಐ): ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು 2009ನೇ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ಕ್ರಮಬದ್ಧತೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ದಾವೆಯನ್ನು ವಜಾಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ.

ಹೈಕೋರ್ಟ್‌ನ ಮದುರೆ ಪೀಠ ಇದೇ ವೇಳೆ, ಅವರ ವಿರುದ್ಧ ಮಾಡಲಾಗಿದ್ದ 29 ಆರೋಪಗಳ ಪೈಕಿ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ ಎರಡು ಆರೋಪಗಳನ್ನು ರದ್ದುಗೊಳಿಸಿದೆ. ಆದರೆ ಇತರ 27 ಆರೋಪಗಳಿಗೆ ಸಂಬಂಧಿಸಿದಂತೆ ಚಿದಂಬರಂ ಅವರು ವಿಚಾರಣೆ ಎದುರಿಸಬೇಕು ಎಂದು ಸ್ಪಷ್ಟಪಡಿಸಿದೆ.

ತಮಿಳುನಾಡಿನ ಶಿವಗಂಗಾ ಕ್ಷೇತ್ರದಲ್ಲಿ ಚಿದಂಬರಂ ವಿರುದ್ಧ ಸ್ಪರ್ಧಿಸಿ ಕೇವಲ 3,354 ಮತಗಳ ಅಂತರದಿಂದ ಸೋಲು ಕಂಡಿದ್ದ ಎಐಎಡಿಎಂಕೆ ದ ರಾಜಾ ಕಣ್ಣಪ್ಪನ್ ಅವರು ಚಿದಂಬರಂ ಆಯ್ಕೆ ಪ್ರಶ್ನಿಸಿ ದಾವೆ ಹೂಡಿದ್ದರು. ಅದನ್ನು, ವಜಾಗೊಳಿಸಲು ಕೋರಿ ಚಿದಂಬರಂ ಅರ್ಜಿ ಸಲ್ಲಿಸಿದ್ದರು.

ADVERTISEMENT

ಚಿದಂಬರಂ ಅವರು ಚುನಾವಣೆ ವೇಳೆ ಬ್ಯಾಂಕ್ ಅಧಿಕಾರಿಗಳು ಹಾಗೂ ಬ್ಯಾಂಕ್‌ನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದಾರೆ ಎಂದು ಕಣ್ಣಪ್ಪನ್ ಮಾಡಿರುವ ಆರೋಪಗಳನ್ನು ವಿಚಾರಣೆ ಆಲಿಸಿದ ನ್ಯಾಯಮೂರ್ತಿ ವೆಂಕಟರಾಮನ್ ರದ್ದುಗೊಳಿಸಿದರು.

2009ರ ಜೂನ್ 25ರಂದು ನಡೆದ ಚುನಾವಣೆಯಲ್ಲಿ ಶಿವಗಂಗಾ ಕ್ಷೇತ್ರದಿಂದ ಚಿದಂಬರಂ ಅವರ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು. ಅಂದು ನಡೆದ ಮತದಾನದ ವೇಳೆ ಸ್ವತಃ ಚಿದಂಬರಂ, ಅವರ ಏಜೆಂಟರು ಹಾಗೂ ಮತ್ತಿತರರು ಅಕ್ರಮಗಳನ್ನು ನಡೆಸಿದ್ದಾರೆ ಎಂದು ಕಣ್ಣಪ್ಪನ್ ದೂರಿದ್ದಾರೆ.

ಇಡೀ ಲೋಕಸಭಾ ಕ್ಷೇತ್ರದಲ್ಲಿ, ವಿಶೇಷವಾಗಿ ಅಲಂಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಲಾವಣೆಯಾದ ಮತಗಳ ಮರುಎಣಿಕೆ ನಡೆಸಬೇಕು ಎಂದೂ ಅವರು ಕೋರಿದ್ದಾರೆ.

ಚಿದಂಬರಂ ಲೇವಡಿ

ಮದ್ರಾಸ್ ಹೈಕೋರ್ಟ್‌ನ ಮದುರೆ  ಪೀಠದ ಆದೇಶದ ಹಿನ್ನೆಲೆಯಲ್ಲಿ ತಾವು ರಾಜೀನಾಮೆ ನೀಡುವುದಿಲ್ಲ ಎಂದು ಸಚಿವ ಚಿದಂಬರಂ ಸ್ಪಷ್ಟಪಡಿಸಿದ್ದಾರೆ.

`ನ್ಯಾಯಾಲಯ ನನ್ನ ಮನವಿ ಪುರಸ್ಕರಿಸದೇ ಇರುವುದರಿಂದ ನನಗೇನೂ ಹಿನ್ನಡೆಯಾಗಿಲ್ಲ. ಬದಲಾಗಿ ನನ್ನ ಎದುರಾಳಿಗೆ ಇದರಿಂದ ಹಿನ್ನಡೆಯಾಗಿದೆ~ ಎಂದು  ಸಮರ್ಥಿಸಿಕೊಂಡಿದ್ದಾರೆ.

ಈ ತೀರ್ಪು ಪ್ರಕಟವಾಗುತ್ತಿದ್ದಂತೆ ತಮ್ಮ ರಾಜೀನಾಮೆಗೆ ಒತ್ತಾಯಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ  `ದೊಡ್ಡ ಅಜ್ಞಾನಿಗಳು~ ಎಂದು ಮೂದಲಿಸಿದ್ದಾರೆ.

ಇದು ಚುನಾವಣಾ ದಾವೆಗೆ ಸಂಬಂಧಿಸಿದ ಪ್ರಕರಣ. ಪ್ರಸ್ತುತ 15ನೇ ಲೋಕಸಭೆಯಲ್ಲಿ ಸಂಸದರ ವಿರುದ್ಧ ಒಟ್ಟು 111 ಚುನಾವಣಾ ದಾವೆಗಳಿವೆ ಎಂದು ಅವರು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.