ADVERTISEMENT

ಚುನಾವಣಾ ಆಯೋಗಕ್ಕೆ ಬೇಣಿ ಪ್ರಸಾದ್ ಉತ್ತರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ತಾವು ಉಲ್ಲಂಘಿಸಿಲ್ಲ ಎಂದು ಕೇಂದ್ರ ಉಕ್ಕು ಖಾತೆಯ ಬೇಣಿ ಪ್ರಸಾದ್ ವರ್ಮಾ ಅವರು ಚುನಾವಣೆ ಆಯೋಗಕ್ಕೆ ಸಮಜಾಯಿಷಿ ನಿಡಿದ್ದಾರೆ.

ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮುಸ್ಲಿಮರಿಗೆ ಒಳ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದರಿಂದ ಬೇಣಿ ಅವರು ಚುನಾವಣೆ ಆಯೋಗದ ಕೆಂಗಣ್ಣಿಗೆ ಗುರಿಯಾಗಿ ಶೋಕಾಸ್ ನೋಟಿಸ್ ಪಡೆದಿದ್ದರು.

ಕಳೆದ ವಾರ ಫಾರೂಕಾಬಾದ್‌ನಲ್ಲಿ ಭಾಷಣ ಮಾಡುತ್ತ ಒಳಮೀಸಲಾತಿಯ ಹೇಳಿಕೆ ಬಗ್ಗೆ ಆಯೋಗ ಕ್ರಮ ತೆಗೆದುಕೊಂಡರೂ ಹೆದರುವುದಿಲ್ಲ ಎಂದು ಸವಾಲೆಸೆದಿದ್ದರು. ಆದರೆ ಈಗ ನಿಲುವು ಬದಲಾಯಿಸಿರುವ ವರ್ಮಾ ಅವರು, ಆಯೋಗಕ್ಕೆ ನೀಡಿರುವ ಉತ್ತರದಲ್ಲಿ `ತಾವು ಯಾವುದೇ ತಪ್ಪೆಸಗಿಲ್ಲ~ ಎಂದಿದ್ದಾರೆ.

ಆಯೋಗದ ಮುಖ್ಯ ಆಯುಕ್ತ ಎಸ್.ವೈ. ಖರೇಶಿ, ಆಯುಕ್ತರಾದ ವಿ. ಎಸ್. ಸಂಪತ್,್ತ ಎಚ್.ಎಸ್. ಬ್ರಹ್ಮಾ ಮಂಗಳವಾರ ಸಭೆ ಸೇರಿ ವರ್ಮಾ ಉತ್ತರ ಪರಿಶೀಲನೆ ಮಾಡಲಿದ್ದಾರೆ.

ವರ್ಮಾ ಅವರು ತಮಗೆ ನೀಡಲಾಗಿದ್ದ ಗಡುವಿಗೆ ಮೊದಲೇ ಮೊಹರು ಮಾಡಿದ ಲಕೋಟೆಯಲ್ಲಿ ಉತ್ತರವನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. ಉತ್ತರದಲ್ಲಿ `ತಾವು ಸಚಿವರಾಗಿ ಒಳಮಿಸಲಾತಿ ಬಗ್ಗೆ ಮಾತನಾಡಿಲ್ಲ; ಬದಲಿಗೆ ಕಾಂಗ್ರೆಸ್ ಮುಖಂಡರಾಗಿ ಪಕ್ಷದ ಪ್ರಣಾಳಿಕೆಯ ಬಗ್ಗೆ ಮಾತನಾಡುವಾಗ ಒಳ ಮೀಸಲಾತಿ ಬಗ್ಗೆ ಪ್ರಸ್ತಾಪ ಮಾಡಿದ್ದೆ~ ಎಂದು ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.