ADVERTISEMENT

‘ಚುನಾವಣಾ ಆಯೋಗ ಬಿಜೆಪಿಯ ಪ್ರೇಯಸಿ’

ಪಿಟಿಐ
Published 30 ಮೇ 2018, 19:30 IST
Last Updated 30 ಮೇ 2018, 19:30 IST
‘ಚುನಾವಣಾ ಆಯೋಗ ಬಿಜೆಪಿಯ ಪ್ರೇಯಸಿ’
‘ಚುನಾವಣಾ ಆಯೋಗ ಬಿಜೆಪಿಯ ಪ್ರೇಯಸಿ’   

ಮುಂಬೈ: ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದಕ್ಕೆ ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಶಿವಸೇನಾ ಕಿಡಿಕಾರಿದೆ.

ಚುನಾವಣಾ ಆಯೋಗ, ಚುನಾವಣೆ ಮತ್ತು ಪ್ರಜಾಪ್ರಭುತ್ವ ಎನ್ನುವುದು ಅಧಿಕಾರದಲ್ಲಿರುವವರ ‘ಪ್ರೇಯಸಿ’ ಎಂದು ಲೇವಡಿ ಮಾಡಿದೆ.

ಸರ್ವಾಧಿಕಾರಿ ಮನಸ್ಥಿತಿ ಹೊಂದಿರುವ ಬಿಜೆಪಿ, ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ವಿದ್ಯುನ್ಮಾನ ಮತ ಯಂತ್ರಗಳನ್ನು(ಇವಿಎಂ) ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

ADVERTISEMENT

ಚುನಾವಣೆ ಪ್ರಕ್ರಿಯೆ ಮೇಲೆ ನಾಗರಿಕರು ವಿಶ್ವಾಸ ಕಳೆದುಕೊಂಡರೆ ಪ್ರಜಾಪ್ರಭುತ್ವಕ್ಕೆ ಅಪಾಯ. ಭಾರತವನ್ನು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇವಿಎಂಗಳು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿವೆ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಮಹಾರಾಷ್ಟ್ರದ ಭಂಡಾರಾ–ಗೋಂದಿಯಾ ಮತ್ತು ಪಾಲ್ಘರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳಲ್ಲಿ ಉಂಟಾದ ತಾಂತ್ರಿಕ ದೋಷಗಳ ಬಗ್ಗೆಯೂ ಸಂಪಾದಕೀಯದಲ್ಲಿ ಪ್ರಸ್ತಾಪಿಸಲಾಗಿದೆ.

ಚುನಾವಣೆಯಲ್ಲಿ ಪ್ರತಿಯೊಂದು ಮತವೂ ಮುಖ್ಯ ಮತ್ತು ನಿರ್ಣಾಯಕ. ಆದರೆ, ಇವಿಎಂಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಸರದಿ ಸಾಲಿನಲ್ಲಿ ನಿಂತಿದ್ದ ಸಾವಿರಾರು ಮಂದಿ ಮತ ಚಲಾಯಿಸದೆ ಹಿಂತಿರುಗಿದ್ದಾರೆ ಎಂದು ತಿಳಿಸಿದೆ.

ಪ್ರಸ್ತುತ ಚುನಾವಣಾ ಆಯೋಗ ಮತ್ತು ಅಲ್ಲಿನ ಅಧಿಕಾರಿಗಳು ಸರ್ಕಾರದ ಗುಲಾಮರಾಗಿದ್ದಾರೆ. ಹೀಗಾಗಿ, ಮದ್ಯ ಮತ್ತು ಹಣ ವಿತರಣೆ ಮುಂತಾದ ಅಕ್ರಮಗಳ ಬಗ್ಗೆ ದೂರು ನೀಡಿದರೂ ಸ್ವೀಕರಿಸುತ್ತಿಲ್ಲ ಎಂದೂ ಅದು ಆರೋಪಿಸಿದೆ.

ಬಿಸಿಲಿನ ನೆಪ: ಶಿವಸೇನಾ ಟೀಕೆ

ಬಿಸಿಲು ಹೆಚ್ಚಾಗಿದ್ದರಿಂದ ಇವಿಎಂಗಳು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎನ್ನುವ ಚುನಾವಣಾ ಆಯೋಗದ ಹೇಳಿಕೆಯನ್ನು ಸಹ ಶಿವಸೇನಾ ಕಟುವಾಗಿ ಟೀಕಿಸಿದೆ.

ತಾಪಮಾನದಲ್ಲಿ ಏರಿಳಿಕೆಯಾಗುವುದು ಸಹಜ. ಆದರೆ, ಬಿಸಿಲಿನ ಬೇಗೆಯಿಂದ ಪ್ರಧಾನಿ ಅವರ ವಿಮಾನದ ಎಂಜಿನ್‌ ಸ್ಥಗಿತಗೊಂಡಿರುವುದು ಅಥವಾ ಬಿಜೆಪಿಯ ಸಾಮಾಜಿಕ ಜಾಲತಾಣದ ಕಂಪ್ಯೂಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದನ್ನು ಎಂದಿಗೂ ಕೇಳಿಲ್ಲ. ಆದ್ದರಿಂದ, ಇವಿಎಂಗಳು ಮಾತ್ರ ತಾಪಮಾನ ಹೆಚ್ಚಾದರೆ ಏಕೆ ಕಾರ್ಯನಿರ್ವಹಿಸುವುದಿಲ್ಲ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.