ADVERTISEMENT

ಚುನಾವಣೆಯಲ್ಲಿ ಅಕ್ರಮ ನಡೆಸಿ ಜಯ:ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST
ಚುನಾವಣೆಯಲ್ಲಿ ಅಕ್ರಮ ನಡೆಸಿ ಜಯ:ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು
ಚುನಾವಣೆಯಲ್ಲಿ ಅಕ್ರಮ ನಡೆಸಿ ಜಯ:ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು   

ನವದೆಹಲಿ (ಪಿಟಿಐ): ಚುನಾವಣೆಯಲ್ಲಿ ಅಕ್ರಮ ನಡೆಸಿ ಜಯ ಗಳಿಸಿದ ಅಭ್ಯರ್ಥಿ ವಿರುದ್ಧ ಸೋತ ವ್ಯಕ್ತಿಯು ಸೂಕ್ತ ಸಾಕ್ಷ್ಯಾಧಾರ ಕಲೆ ಹಾಕಲು ವಿಫಲವಾದಲ್ಲಿ, ಮಾರ್ಪಡಿಸಿದ ಅರ್ಜಿ ಸಲ್ಲಿಸಬಹುದೇ? ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ಬಗೆಯ ತೀರ್ಪು ನೀಡಿದ್ದಾರೆ.

`ಸೋತ ಅಭ್ಯರ್ಥಿಯು ಅರ್ಜಿ ತಿದ್ದುಪಡಿ ಮಾಡುವ ಹಕ್ಕು ಹೊಂದಿದ್ದಾನೆ~ ಎಂದು ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ಪೀಠ ಆದೇಶ ನೀಡಿದೆ. ಇದೇ ವೇಳೆ ನ್ಯಾಯಮೂರ್ತಿ ಜೆ.ಚೆಲಮೇಶ್ವರ್ ಅವರು, ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಇದನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕ ಈಶ್ವರದಾಸ್ ರೊಹನಿ ಅವರು 2008ರಲ್ಲಿ ಮಧ್ಯ ಪ್ರದೇಶದ ಜಬಲ್‌ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಜಯ ಗಳಿಸಿದ್ದರು. ಅವರ ವಿರುದ್ಧ ಸೋತಿದ್ದ ಅಲೋಕ್ ಮಿಶ್ರಾ ಅವರು ಈ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ, ರೊಹನಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ಅಕ್ರಮ ನಡೆಸಿ ಜಯ ಗಳಿಸಿರುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸದ ಮಿಶ್ರಾ ಅವರ ಅರ್ಜಿಯನ್ನು ಹೈಕೋರ್ಟ್ ಯಾವ ಆಧಾರದ ಮೇಲೆ ವಿಚಾರಣೆಗೆ ಅಂಗೀಕರಿಸಿದೆ ಎಂಬುದನ್ನು ರೊಹನಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ತಮ್ಮ ವಿರುದ್ಧ ಮಾಡಲಾಗಿರುವ ಆರೋಪಕ್ಕೆ ಪುಷ್ಟಿ ನೀಡುವಂತಹ ಯಾವುದೇ ವಸ್ತುವನ್ನೂ ಮಿಶ್ರಾ ಅಥವಾ ಅವರ ಏಜೆಂಟ್ ಒದಗಿಸಿಲ್ಲ, ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಇದು ಕಡ್ಡಾಯ ಎನ್ನುವುದು ರೊಹನಿ ಅವರ ವಾದ.
ಚೆಕ್, ಕೊಡುಗೆಗಳ ವಿತರಣೆ ಮತ್ತು ಜಿಲ್ಲಾಧಿಕಾರಿ ಮೇಲೆ ಪ್ರಭಾವ ಬೀರಿದ್ದಾರೆ ಎನ್ನುವ ಆರೋಪ ರೊಹನಿ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.