ADVERTISEMENT

ಚುನಾವಣೆ ಮೇಲೆ ಪ್ರಭಾವ ಬೀರದು

ಬೆಂಗಳೂರು ಸ್ಫೋಟ ಪ್ರಕರಣ- ಶಿಂಧೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST
ಚುನಾವಣೆ ಮೇಲೆ ಪ್ರಭಾವ ಬೀರದು
ಚುನಾವಣೆ ಮೇಲೆ ಪ್ರಭಾವ ಬೀರದು   

ನವದೆಹಲಿ: ಬೆಂಗಳೂರಿನಲ್ಲಿ ಬುಧವಾರ ನಡೆದ ಸ್ಫೋಟಕ್ಕೂ ಈಚೆಗೆ ಸಂಭವಿಸಿದ ಹೈದರಾಬಾದ್ ಸ್ಫೋಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದಕರ ಸಂಭವನೀಯ ದಾಳಿ ಕುರಿತು ಕಳೆದ ಎರಡು, ಮೂರು ತಿಂಗಳಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದೆ ಎಂದು  ಶಿಂಧೆ ಸ್ಪಷ್ಟಪಡಿಸಿದರು. ಬೆಂಗಳೂರು ಸ್ಫೋಟ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಚುನಾವಣೆ ಯಥಾಪ್ರಕಾರ ನಡೆಯಲಿದೆ. ಈ ವಿಷಯದಲ್ಲಿ ಗೊಂದಲ ಉಂಟಾಗುವುದಿಲ್ಲ ಎಂದು ಪತ್ರಕರ್ತರಿಗೆ ತಿಳಿಸಿದರು.

`ಸ್ಫೋಟ ಸಂಬಂಧ ಯಾವುದೇ ಆರೋಪಿಗಳನ್ನು ಬಂಧಿಸಿರುವ ಕುರಿತು ತಮಗೆ ಮಾಹಿತಿ ಇಲ್ಲ. ಆರೋಪಿಗಳನ್ನು ಬಂಧಿಸುತ್ತೇವೆ ಎನ್ನುವ ಭರವಸೆಯನ್ನು ದೇಶದ ಜನರಿಗೆ ನೀಡುತ್ತೇನೆ' ಎಂದು ತಿಳಿಸಿದರು. ದೆಹಲಿ ಬಾಂಬ್ ಸ್ಫೋಟದ ಅಪರಾಧಿ ದೇವೇಂದರ್ ಪಾಲ್‌ಸಿಂಗ್ ಭುಲ್ಲರ್ ಅವರಿಗೆ ಕ್ಷಮಾದಾನ ನೀಡುವಂತೆ ಮನವಿ ಮಾಡಿ ಶಿರೋಮಣಿ ಅಕಾಲಿದಳ ನೀಡಿರುವ ಮನವಿ ಪರಿಶೀಲನೆಯಲ್ಲಿದೆ ಎಂದು ಗೃಹ ಸಚಿವರು ವಿವರಿಸಿದರು.

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್ ಮತ್ತು ಅವರ ಪುತ್ರ ಉಪ ಮುಖ್ಯಮಂತ್ರಿ ಸುಖ್‌ಬೀರ್ ಬಾದಲ್ ಸೋಮವಾರ ರಾಷ್ಟ್ರಪತಿ ಹಾಗೂ ಪ್ರಧಾನಿ ಅವರನ್ನು ಭೇಟಿ ಮಾಡಿ ಭುಲ್ಲರ್‌ಗೆ ಕ್ಷಮಾದಾನ ನೀಡುವಂತೆ ಮನವಿ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅವರ ಮನವಿಯನ್ನು ಎಲ್ಲ ಮಗ್ಗಲುಗಳಿಂದ ಪರಿಶೀಲಿಸಲಾಗುತ್ತಿದೆ ಎಂದು ನುಡಿದರು.

ತಾವು ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿಗಳು ಬಹಳ ವರ್ಷ ಇತ್ಯರ್ಥಪಡಿಸದೆ ಉಳಿಸಿಕೊಂಡಿದ್ದರಿಂದ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತನೆ ಮಾಡುವಂತೆ ಭುಲ್ಲರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ತಿರಸ್ಕರಿಸಿತು. 1993ರ ಸೆಪ್ಟೆಂಬರ್ 10ರಂದು ದೆಹಲಿ ಯುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ಫೋಟದಲ್ಲಿ 9ಮಂದಿ ಮೃತಪಟ್ಟು, 17 ಮಂದಿ ಗಾಯಗೊಂಡ ಘಟನೆ ಸಂಬಂಧ ಭುಲ್ಲರ್‌ಗೆ ಜೀವಾವಧಿ ಶಿಕ್ಷೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.