ADVERTISEMENT

ಚೆಕ್ ಬೌನ್ಸ್ ಪ್ರಕರಣ: ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 11:50 IST
Last Updated 12 ಅಕ್ಟೋಬರ್ 2012, 11:50 IST
ಚೆಕ್ ಬೌನ್ಸ್ ಪ್ರಕರಣ: ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್
ಚೆಕ್ ಬೌನ್ಸ್ ಪ್ರಕರಣ: ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್   

ಹೈದರಾಬಾದ್ (ಐಎಎನ್ಎಸ್): ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉದ್ಯಮ ದೊರೆ ವಿಜಯ್ ಮಲ್ಯ ಮತ್ತು ಇತರ ಐವರ ವಿರುದ್ಧ ಸ್ಥಳೀಯ ನ್ಯಾಯಾಲಯವೊಂದು ಶುಕ್ರವಾರ ಜಾಮೀನುರಹಿತ ವಾರಂಟ್ ಜಾರಿ ಮಾಡಿದೆ.

ಇಲ್ಲಿನ ರಾಜೀವ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ಜಿಎಂಆರ್. ಹೈದರಾಬಾದ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (ಜಿಎಚ್ಐಎಎಲ್) ದಾಖಲಿಸಿದ್ದ  ಪ್ರಕರಣದ ವಿಚಾರಣೆ ನಡೆಸಿದ 13ನೇ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಲಯವು ಬಿಕ್ಕಟ್ಟಿನಿಂದ ನಲುಗುತ್ತಿರುವ ಕಿಂಗ್ ಫಿಷರ್ ಏರ್ ಲೈನ್ಸ್ ವಿರುದ್ಧ ವಾರಂಟ್ ಹೊರಡಿಸಿತು.

ಜಿಎಂಆರ್ ಹೈದರಾಬಾದ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ಕಳೆದ ಆಗಸ್ಟ್ ತಿಂಗಳಲ್ಲಿ ಕಿಂಗ್ ಫಿಷರ್ ನೀಡಿದ್ದ ಬಳಕೆ ಶುಲ್ಕ ಸಂಬಂಧಿತ 10.3 ಕೋಟಿ ರೂಪಾಯಿಗಳ ಚೆಕ್ ಅಮಾನ್ಯಗೊಂಡ  ಬಳಿಕ ಈ ಖಟ್ಲೆ ದಾಖಲಿಸಿತ್ತು.

ಸಾಕಷ್ಟು ಸಮನ್ಸ್ ನೀಡಿದರೂ ವಿಜಯ್ ಮಲ್ಯ ಅವರು ನ್ಯಾಯಾಲಯದಲ್ಲಿ ಹಾಜರಾಗಲು ವಿಫಲರಾದುದನ್ನು ಅನುಸರಿಸಿ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ತಾವು ವಿದೇಶದಲ್ಲಿ ಇರುವುದರಿಂದ ವೈಯಕ್ತಿಕ ಹಾಜರಿಗೆ ವಿನಾಯ್ತಿ ನೀಡಬೇಕೆಂದು ವಿಜಯ್ ಮಲ್ಯ ಕೋರಿದ್ದರು ಎನ್ನಲಾಗಿದೆ.

ಪ್ರಕರಣದ ಪ್ರತಿವಾದಿಗಳಲ್ಲಿ ಕಿಂಗ್ ಪಿಷರ್, ಅದರ ಅಧ್ಯಕ್ಷ ಮಲ್ಯ ಮತ್ತು ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸಂಜಯ್ ಅಗರ್ ವಾಲ್ ಸೇರಿದ್ದಾರೆ.

ಪಾರ್ಕಿಂಗ್, ಲ್ಯಾಂಡಿಂಗ್ ಮತ್ತು ನೇವಿಗೇಷನ್ ಶುಲ್ಕಗಳ ಸಲುವಾಗಿ ಕಿಂಗ್ ಫಿಷರ್ ಚೆಕ್ ಗಳನ್ನು ನೀಡಿತ್ತು.
ಬಿಕ್ಕಟ್ಟು ಎದುರಿಸುತ್ತಿರುವ ಏರ್ ಲೈನ್ಸ್ ಮುಂಬೈ ಮತ್ತು ದೆಹಲಿಯಲ್ಲೂ ಇದೇ ಮಾದರಿ ಪ್ರಕರಣಗಳನ್ನು ಎದುರಿಸುತ್ತಿದೆ. ಚೆಕ್ ಗಳು ಅಮಾನ್ಯಗೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ನಿರ್ವಾಹಕರು ಇಲ್ಲೂ ನ್ಯಾಯಾಲಯದ ಕಟ್ಟೆ ಏರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.