ADVERTISEMENT

ಜಂಟಿ ಪ್ರವೇಶ ಪರೀಕ್ಷೆ ಅಡ್ವಾನ್ಸ್‌ನ ಫಲಿತಾಂಶ ಪ್ರಕಟ; ಹರಿಯಾಣದ ಪ್ರಣವ್‌ಗೆ ಮೊದಲ ಸ್ಥಾನ

ರಾಜ್ಯದ ಅದ್ವಯ್‌ ಗಿರೀಶ್‌ಗೆ 43ನೇ ರ್‍ಯಾಂಕ್‌

ಪಿಟಿಐ
Published 10 ಜೂನ್ 2018, 19:39 IST
Last Updated 10 ಜೂನ್ 2018, 19:39 IST

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್‌ನ ಫಲಿತಾಂಶ ಪ್ರಕಟವಾಗಿದ್ದು ಹರಿಯಾಣದ ಪಂಚಕುಲದ ಪ್ರಣವ್‌ ಗೋಯಲ್‌ ಮೊದಲ ಸ್ಥಾನ ಪಡೆದಿದ್ದಾರೆ. ರಾಜಸ್ಥಾನದ ಸಾಹಿಲ್‌ ಜೈನ್‌ ಅವರಿಗೆ ಎರಡನೇ ರ್‍ಯಾಂಕ್‌ ದೊರೆತಿದೆ.

ಈ ವರ್ಷದ ಪರೀಕ್ಷೆಯನ್ನು ಐಐಟಿ ಕಾನ್ಪುರ ಏರ್ಪಡಿಸಿತ್ತು. ಈ ಬಾರಿಯ ಪರೀಕ್ಷೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ ಮೂಲಕ ನಡೆಸಲಾಗಿತ್ತು.

ದೆಹಲಿಯ ಕಳಶ್‌ ಗುಪ್ತಾ ಮೂರನೇ ರ್‍ಯಾಂಕ್‌ ಗಳಿಸಿದ್ದಾರೆ. ವಿದ್ಯಾರ್ಥಿನಿಯರಲ್ಲಿ ರಾಜಸ್ಥಾನದ ಮಿನಾಲ್‌ ಪ್ರಕಾಶ್‌
ಮೊದಲಿಗರಾಗಿದ್ದಾರೆ.

ADVERTISEMENT

ದೇಶದ ಎಲ್ಲ ಐಐಟಿಗಳು, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್‌) ಹಾಗೂ ರಾಜೀವ್‌ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆಗಳ (ಆರ್‌ಜಿಐಪಿಟಿ) ಪ್ರವೇಶಕ್ಕಾಗಿ ಈ ಪರೀಕ್ಷೆ ನಡೆಸಲಾಗುತ್ತಿದೆ.

ಬೆಂಗಳೂರಿನ ಅದ್ವಯ್ ಗಿರೀಶ್‌ 43ನೇ ರ್‍ಯಾಂಕ್‌: ಜೆಇಇ ಅಡ್ವಾನ್ಸ್‌ನಲ್ಲಿ (ಜಂಟಿ ಪ್ರವೇಶ ಪರೀಕ್ಷೆ) ನಗರದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಎಫ್‌ಐಐಟಿ ಜೆಇಇ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಅದ್ವಯ್ ಗಿರೀಶ್‌ 360ಕ್ಕೆ 289 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 43ನೇ ರ್‍ಯಾಂಕ್‌ ಗಳಿಸಿದ್ದಾರೆ.

ತಿರುವನಂತಪುರದವರಾದ ಅದ್ವಯ್‌ ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ‘ಬಾಲ್ಯದಿಂದಲೂ ಐಐಟಿನಲ್ಲಿ ಓದುವುದು ನನ್ನ ಕನಸಾಗಿತ್ತು. ಇದನ್ನು ಸಾಕಾರಗೊಳಿಸಿಕೊಳ್ಳಲು ನೆರವಾದ ಸಂಸ್ಥೆಗೆ ವಂದನೆ ಎಂದು ತಿಳಿಸಿದ್ದಾರೆ.

**

18,138: ಒಟ್ಟು ಸ್ಥಾನಗಳು

1,55,158: ಪರೀಕ್ಷೆ ಬರೆದವರ ಸಂಖ್ಯೆ

2,076: ಅರ್ಹತೆ ಪಡೆದ ವಿದ್ಯಾರ್ಥಿನಿಯರು

**

ವಿದೇಶಿಯರ ಪ್ರಮಾಣ ಕಮ್ಮಿ

ಈ ಬಾರಿ 881 ವಿದೇಶಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ ಮೂವರು ಮಾತ್ರ ಪ್ರವೇಶ ಅರ್ಹತೆ ಪಡೆದಿದ್ದಾರೆ. ಸಾಗರೋತ್ತರ ಭಾರತೀಯರಲ್ಲಿ 55 ಮಂದಿ, ಭಾರತ ಸಂಜಾತ ವಿದೇಶಿಯರಲ್ಲಿ ಒಂಬತ್ತು ಮಂದಿ ಅರ್ಹತೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.