ADVERTISEMENT

ಜಗನ್ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಹೈದರಾಬಾದ್ (ಪಿಟಿಐ): ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ  ನ್ಯಾಯಾಂಗ ಬಂಧನದಲ್ಲಿರುವ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಕಡಪಾ ಸಂಸದ ವೈ.ಎಸ್. ಜಗನ್‌ಮೋಹನ ರೆಡ್ಡಿ ಅವರ ಜಾಮೀನು ಅರ್ಜಿಯನ್ನು ಆಂಧ್ರ ಪ್ರದೇಶ ಹೈಕೋರ್ಟ್ ಸೋಮವಾರ ತಳ್ಳಿಹಾಕಿದೆ.

ಈ ಮೊದಲು ಸಿಬಿಐ ವಿಶೇಷ ನ್ಯಾಯಾಲಯ ತಮ್ಮ ಎರಡೂ ಜಾಮಿನು ಅರ್ಜಿಗಳನ್ನು ತಳ್ಳಿ ಹಾಕಿದ ನಂತರ ಜಗನ್ ಹೈಕೋರ್ಟ್ ಮೊರೆ ಹೋಗಿದ್ದರು. ನಿಗದಿತ ಅವಧಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲು ಸಿಬಿಐ ವಿಫಲವಾದ ಕಾರಣ ಜಾಮೀನು ನೀಡುವಂತೆ ಕೋರಿ ಎರಡು ಅರ್ಜಿ ಸಲ್ಲಿಸಿದ್ದರು. 

ಜಗನ್ ಅವರಿಗೆ ಜಾಮೀನು ನೀಡದಂತೆ ಕೋರಿದ ಸಿಬಿಐ ವಕೀಲರು, ವಿವಾದಿತ `ವ್ಯಾನ್‌ಪಿಕ್' ಯೋಜನೆ ಅವ್ಯವಹಾರ ಪ್ರಕರಣಕ್ಕೆ ಮಾತ್ರ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದ್ದು, ಉಳಿದ ಹಗರಣಗಳಿಗೆ ಇದು ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸಿಬಿಐ ಇದೇ ಮೇ 27ರಂದು ಜಗನ್ ಅವರನ್ನು ಬಂಧಿಸಿತ್ತು. ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್ ಕೂಡ ಜಗನ್ ಜಾಮೀನು ಅರ್ಜಿಯನ್ನು ತಳ್ಳಿಹಾಕಿತ್ತು. ಆದರೆ, ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಅವಕಾಶ ನೀಡಿತ್ತು.

ಜಗನ್ ವಿರುದ್ಧ ದಾಖಲಾಗಿಸಿರುವ ಒಟ್ಟು ಏಳು ಪ್ರಕರಣಗಳಲ್ಲಿ ಇದುವರೆಗೂ ಸಿಬಿಐ ಕೇವಲ ನಾಲ್ಕು ಪ್ರಕರಣಗಳಲ್ಲಿ ಮಾತ್ರ ಆರೋಪಪಟ್ಟಿ ಸಲ್ಲಿಸಿದೆ.

ಸದ್ಯ ಜಗನ್ ಚಂಚಲಗುಡಾ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.