ADVERTISEMENT

ಜನ್ಮದಿನಾಂಕದ ವಿವಾದ: ಸೇನಾ ಮುಖ್ಯಸ್ಥರಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್): ಭೂಸೇನೆ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ವಯಸ್ಸಿನ ವಿವಾದಕ್ಕೆ ಸಂಬಂಧಿಸಿದ ಐತಿಹಾಸಿಕ ಪ್ರಕರಣದಲ್ಲಿ ಶುಕ್ರವಾರ ಸುಪ್ರೀಂ ಕೋರ್ಟ್ ಸರ್ಕಾರದ ನಿಲುವನ್ನು ಎತ್ತಿಹಿಡಿದಿದೆ.

ತಮ್ಮ ನೈಜ ವಯಸ್ಸು ರಕ್ಷಣಾ ಇಲಾಖೆಯ ದಾಖಲೆಗಳಲ್ಲಿ ಇರುವುದಕ್ಕಿಂತ ಕಡಿಮೆಯಿದೆ ಎಂದು ಪಟ್ಟು ಹಿಡಿದು ಸರ್ಕಾರದ ವಿರುದ್ಧ ತೋಳೇರಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದ ಜನರಲ್ ಸಿಂಗ್ ಅವರಿಗೆ ಹಿನ್ನಡೆಯಾಗಿದ್ದು, ಕೋರ್ಟ್ ಇಂಗಿತದಂತೆ ಸೇನಾ ಮುಖ್ಯಸ್ಥರು ತಾವು ಸಲ್ಲಿಸಿದ್ದ ಅರ್ಜಿ ವಾಪಸು ಪಡೆದಿದ್ದಾರೆ.

ಅರ್ಜಿ ವಾಪಸು ಪಡೆಯುವಾಗ ಜನರಲ್ ಸಿಂಗ್, ತಾವು ಸೇವಾವಧಿ ವಿಸ್ತರಣೆಗಾಗಿ ಹೋರಾಟ ನಡೆಸಿಲ್ಲ. ಕೇವಲ ತಮ್ಮ ಆತ್ಮಗೌರವ ಹಾಗೂ ಋಜುತ್ವ ಸಾಬೀತುಪಡಿಸಲು ಮಾತ್ರ  ಈ ಹೆಜ್ಜೆ ಇಟ್ಟಿದ್ದಾಗಿ ತಿಳಿಸಿದ್ದಾರೆ.

ಇದರಿಂದಾಗಿ ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿ ನಡೆದಿದೆ ಎಂದು ಅಪಕೀರ್ತಿಗೆ ಪಾತ್ರವಾಗಿದ್ದ, ಸೇನಾ ಮುಖ್ಯಸ್ಥರು ಮತ್ತು ಸರ್ಕಾರದ ನಡುವಿನ ಘರ್ಷಣೆ ಪ್ರಕರಣ ಗೌರವಯುತವಾಗಿ ಬಗೆಹರಿದಿದೆ. ಸೇವಾವಧಿ ಪೂರೈಸಿ ಜನರಲ್ ವಿ.ಕೆ. ಸಿಂಗ್ ಮೇ 31ರಂದು ನಿವೃತ್ತರಾಗಲಿದ್ದಾರೆ. 

ಕೋರ್ಟ್ ಕಲಾಪ: ವಿ.ಕೆ. ಸಿಂಗ್ ಸಲ್ಲಿಸಿದ್ದ ಅರ್ಜಿ ಶುಕ್ರವಾರ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿ ಆರ್.ಎಲ್. ಲೋಧಾ ಮತ್ತು ಎಚ್. ಎಲ್. ಗೋಖಲೆ ಅವರು ಸೇನಾ ಮುಖ್ಯಸ್ಥರಿಗೆ ಹಲವು ಕಠಿಣ ಪ್ರಶ್ನೆ ಎಸೆದರು. ಕಿಕ್ಕಿರಿದ ಸಭಾಂಗಣದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಯಿತು. 

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸೇರಿದಂತೆ ಎಲ್ಲ ದಾಖಲೆಗಳಲ್ಲೂ ನಿಮ್ಮ ಜನ್ಮದಿನಾಂಕ ಮೇ 10, 1950 ಎಂದೇ ದಾಖಲಾಗಿದೆ. ಯುಪಿಎಸ್‌ಸಿಯಲ್ಲೇ ಜನ್ಮದಿನಾಂಕ ಸರಿಪಡಿಸಿಕೊಳ್ಳಬೇಕಿತ್ತು. ಯುಪಿಎಸ್‌ಸಿ ಜನ್ಮದಿನಾಂಕ ಸರಿಪಡಿಸ ದಿದ್ದಲ್ಲಿ ನೀವೇನು ಮಾಡಲು ಸಾಧ್ಯ ಎಂದು ನ್ಯಾಯಪೀಠ ಪ್ರಶ್ನಿಸಿತು. ಇಂಡಿಯನ್ ಮಿಲಿಟರಿ ಅಕಾಡೆಮಿ ಹಾಗೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗಳಲ್ಲಿ ನಿಮ್ಮ ಜನ್ಮದಿನಾಂಕ ಮೇ 10, 1950 ಎಂದೇ ಇದೆ.

2008 ಮತ್ತು 2009ರಲ್ಲಿ ಉನ್ನತ ಹುದ್ದೆಗೆ ಏರುವಾಗ ನೀವೇ 1950ರ ಜನ್ಮ ದಿನಾಂಕವನ್ನು ಒಪ್ಪಿಕೊಂಡಿದ್ದೀರಿ. ಈಗ ಅದನ್ನು ಹೇಗೆ ಪ್ರಶ್ನಿಸುತ್ತೀರಿ ಎಂದು ನ್ಯಾಯಪೀಠ ಕೇಳಿತು.

 ನಿಮಗೆ ಯಾವುದೇ ಅನ್ಯಾಯವಾಗಿಲ್ಲ. ಸೇನಾ ಮುಖ್ಯಸ್ಥರು ಹುದ್ದೆಯಲ್ಲಿ ಇರುವ ನೀವು ಯಾವುದೇ ಸೇನಾಧಿಕಾರಿ ಬಯಸುವ ಉನ್ನತ ಹುದ್ದೆ ತಲುಪಿದ್ದೀರಿ. ಅಲ್ಲದೇ ನಿಮ್ಮ  ಮೇಲೆ ಸರ್ಕಾರಕ್ಕೆ ಪೂರ್ಣ ನಂಬಿಕೆಯಿದೆ. ನೀವು ಸರ್ಕಾರದ ವಿರುದ್ಧ ಸಲ್ಲಿಸಿರುವ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. 

ಸರ್ಕಾರದ ವಿರುದ್ಧ ಸಲ್ಲಿಸಿರುವ ಅರ್ಜಿ ವಾಪಸು ಪಡೆಯದಿದ್ದಲ್ಲಿ ಅರ್ಜಿ ವಜಾ ಮಾಡುವುದಾಗಿ ನ್ಯಾಯಮೂರ್ತಿಗಳು ಎಚ್ಚರಿಸಿದರು. ಊಟದ ಬಿಡುವಿನ ನಂತರ ಸಿಂಗ್ ಪರ ವಕೀಲ ಪುನೀತ್ ಬಾಲಿ ಅರ್ಜಿ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದರು.

ಸರ್ಕಾರದ ಆದೇಶ ರದ್ದು: ಇದೇ ಸಂದರ್ಭದಲ್ಲಿ ಜನರಲ್ ವಿ.ಕೆ. ಸಿಂಗ್ ತಮ್ಮ  ಜನ್ಮದಿನಾಂಕಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ ಸಲ್ಲಿಸಿದ್ದ ಅಹವಾಲನ್ನು ಸ್ವೀಕರಿಸಲು ಒಪ್ಪದ ಡಿಸೆಂಬರ್ 30ರ ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ.

ಶುಕ್ರವಾರ ಸಿಂಗ್ ಅರ್ಜಿಯ ವಿಚಾರಣೆ ನಡೆಯುತ್ತಿರುವಾಗಲೇ ಸರ್ಕಾರದ ಡಿ. 30ರ ಆದೇಶ ಅನೂರ್ಜಿತ ಎಂದು ಪರಿಗಣಿಸಿರುವುದಾಗಿ ನ್ಯಾಯಪೀಠ ಹೇಳಿತು. ಡಿ. 30ರ ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ ಎಂದು ತಿಳಿಸಿದ ಅಟಾರ್ಜಿ ಜನರಲ್ ಜಿ.ಇ. ವಹನ್ವತಿ, ಆದರೆ ಸಿಂಗ್ ಜನ್ಮದಿನಾಂಕಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಜುಲೈನಲ್ಲಿ ತೆಗೆದುಕೊಂಡ ನಿರ್ಧಾರದಂತೆ ಅವರ ಜನ್ಮದಿನ 1950ರ ಮೇ 10 ಎಂದೇ ಪರಿಗಣಿಸಲಾಗುತ್ತದೆ ಎಂದರು.

ಆತ್ಮಗೌರವಕ್ಕಾಗಿ ಹೋರಾಟ: ಕೋರ್ಟ್ ಕಲಾಪದ ನಂತರ ವರದಿಗಾರರ ಬಳಿ ಮಾತನಾಡಿದ ವಿ.ಕೆ ಸಿಂಗ್ ಅವರ ವಕೀಲ ಪುನೀತ್ ಬಾಲಿ, ತಮ್ಮ ಸೇವಾವಧಿ ವಿಸ್ತರಣೆಗೆ ಈ ಹೋರಾಟ ನಡೆಸುತ್ತಿಲ್ಲ. ಪ್ರಾಮಾಣಿಕತೆ ಸಾಬೀತುಪಡಿಸಲು ಕಾನೂನು ಹೋರಾಟಕ್ಕೆ ಇಳಿದಿದ್ದಾಗಿ ಸಿಂಗ್ ಹೇಳಿದ್ದಾರೆ. ಸರ್ಕಾರ ಅವರ ಋಜುತ್ವ ಪ್ರಶ್ನಿಸಿಲ್ಲ ಎಂಬ ವಹನ್ವತಿ ಹೇಳಿಕೆಯಿಂದ ನಮಗೆ ತೃಪ್ತಿಯಾಗಿದೆ ಎಂದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT