ADVERTISEMENT

ಜನ್ಮದಿನಾಂಕ ವಿವಾದಕ್ಕೆ ಹೊಸ ತಿರುವು: ಸಿಂಗ್ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಚಂಡೀಗಡ: ಭೂಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರ ಜನ್ಮದಿನಾಂಕ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ಜನ್ಮದಿನಾಂಕ ಬದಲಾವಣೆ ಮಾಡದ ಕಾರಣ ವಾರ್ಷಿಕ ಗೋಪ್ಯ ವರದಿ(ಎಸಿಆರ್)ಯಲ್ಲಿ ತಮ್ಮ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾಗಿ ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಯೊಬ್ಬರು ವಿ.ಕೆ.ಸಿಂಗ್ ಅವರ ವಿರುದ್ಧ ಆರೋಪ ಮಾಡಿದ್ದಾರೆ.

ಈ ಸಂಬಂಧ ಮೇಜರ್ ಜನರಲ್ ಟಿ.ಎಸ್.ಹಂಡಾ ಅವರು ಕಳೆದ ಏಪ್ರಿಲ್‌ನಲ್ಲಿ ಸಲ್ಲಿಸಿದ್ದ ಮನವಿಯನ್ನು ಸಶಸ್ತ್ರ ಪಡೆ ನ್ಯಾಯಮಂಡಳಿಯ ಚಂಡೀಗಡ ಪೀಠವು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಪ್ರಸ್ತುತ ಶಿಮ್ಲಾದ ಸೇನಾ ತರಬೇತಿ ಕಮಾಂಡ್‌ನಲ್ಲಿ ಹಂಡಾ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಜನ್ಮದಿನಾಂಕವನ್ನು ಬದಲಾವಣೆ ಮಾಡುವಂತೆ ಸೇನಾ ಕಾರ್ಯದರ್ಶಿ ಶಾಖೆಗೆ ಸಿಂಗ್ ಅರ್ಜಿ ಸಲ್ಲಿಸಿದ್ದರು.

ಆದರೆ ಶಾಖೆಯು ಈ ಅರ್ಜಿಯನ್ನು ಪರಿಗಣಿಸಲಿಲ್ಲ. ಆಗ ಹಂಡಾ ಅವರು ದೆಹಲಿಯಲ್ಲಿರುವ ಸೇನಾ ಕೇಂದ್ರ ಕಚೇರಿಯಲ್ಲಿ ಉಪ ಸೇನಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

`ಸೇನಾ ಕಮಾಂಡರ್ ಆಗಿದ್ದ ಸಿಂಗ್ ಅವರು ವಾರ್ಷಿಕ ಗೋಪ್ಯ ವರದಿಯಲ್ಲಿ ನನ್ನ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಹಾಗಾಗಿ ಅತ್ಯುತ್ತಮ ಸೇವೆ ಸಲ್ಲಿಸಿದರೂ ನನ್ನನ್ನು ಬಡ್ತಿಗೆ ಪರಿಗಣಿಸಲಿಲ್ಲ~ ಎಂದು ಹಂಡಾ ಮನವಿಯಲ್ಲಿ ಆರೋಪಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.