ADVERTISEMENT

ಜಾರಿನಿರ್ದೇಶನಾಲಯಕ್ಕೆ ತರಾಟೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2011, 18:55 IST
Last Updated 9 ಮಾರ್ಚ್ 2011, 18:55 IST

ಮುಂಬೈ (ಪಿಟಿಐ): ಪುಣೆ ಮೂಲದ ಕುದುರೆ ತಳಿ ಅಭಿವೃದ್ಧಿ ಕೇಂದ್ರದ ಮಾಲೀಕ ಹಸನ್ ಅಲಿಯನ್ನು ಅಕ್ರಮ ಲೇವಾದೇವಿ ಆರೋಪದಡಿ ಬಂಧಿಸಿ ತನ್ನ ವಶದಲ್ಲಿರಿಸಿಕೊಂಡ ನಂತರವೂ, ಆತನ ವಿರುದ್ಧ ಸೂಕ್ತ ಮೊಕದ್ದಮೆ ದಾಖಲಿಸದ ಜಾರಿ ನಿರ್ದೇಶನಾಲಯವನ್ನು (ಇ.ಡಿ) ಇಲ್ಲಿನ ನ್ಯಾಯಾಲಯ ಬುಧವಾರ ತರಾಟೆಗೆ ತೆಗೆದುಕೊಂಡಿತು.ಇದೇ ವೇಳೆ ತೆರಿಗೆ ವಂಚನೆ ಆರೋಪದ ಮೇಲೆ ಬಂಧಿತನಾಗಿರುವ ಪುಣೆ ಮೂಲದ ಅಲಿಯನ್ನು ವಿಚಾರಣೆಗೆ ಒಳಪಡಿಸುವ ಸಲುವಾಗಿ ಇನ್ನಷ್ಟು ದಿನ  ತನ್ನ ವಶಕ್ಕೆ ನೀಡಲು ಕೋರಿರುವ ಇ.ಡಿ. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಗುರುವಾರಕ್ಕೆ (ಮಾರ್ಚ್ 10) ಮುಂದೂಡಿದೆ.

ಜಾರಿ ನಿರ್ದೇಶನಾಲಯದ ಕಾರ್ಯವೈಖರಿ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.ಈ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ  ‘ತಕ್ಕಮಟ್ಟಿನ ಹೋಂವರ್ಕ್’ ಮಾಡಲು ಸೂಚಿಸಿದ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಎಂ.ಎಲ್.ತಹಲಿಯಾನಿ ಅವರು, ‘ಈವರೆಗೆ ಯಾವುದೇ ಮೊಕದ್ದಮೆ ದಾಖಲಿಸದ ನೀವು ನ್ಯಾಯಾಲಯ ಪ್ರಕರಣದ ವಿಚಾರಣೆ ಆಲಿಸಬೇಕೆಂದು ನಿರೀಕ್ಷಿಸುತ್ತೀರಿ’ ಎಂದು ತರಾಟೆಗೆ ತೆಗೆದು ಕೊಂಡರು.

ಇದೇ ವೇಳೆ, ಈ ಅರ್ಜಿಯ ವಿಚಾರಣೆ ಯಾರ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆಯೂ ನ್ಯಾಯಾಲಯ ಪ್ರಶ್ನೆಯನ್ನು ಎತ್ತಿದೆ. ಈ ಪ್ರಕರಣವನ್ನು ಮೊದಲು ಮ್ಯಾಜಿಸ್ಟ್ರೇಟ್ ಅವರ ಮುಂದಕ್ಕೆ ಕೊಂಡೊಯ್ಯಬೇಕಿತ್ತು ಎಂದು ತಹಲಿಯಾನಿ ಅಭಿಪ್ರಾಯಪಟ್ಟರು.ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ಪುಂಡೆ ಮಾತನಾಡಿ, ‘ಅಕ್ರಮ ಲೇವಾದೇವಿ ನಿರ್ಮೂಲನೆ ಕಾಯ್ದೆಯಡಿ, ಈ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ವಿಶೇಷ ನ್ಯಾಯಾಲಯಕ್ಕೆ ಇದೆ’ ಎಂದು ವಾದಿಸಿದರು.

ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಹಾಗೂ ರೇಸು ಕುದುರೆಗಳ ಮಾಲೀಕನಾದ ಹಸನ್ ಅಲಿಯನ್ನು ಅಕ್ರಮ ಲೇವಾದೇವಿ ನಿರ್ಮೂಲನೆ ತಡೆ ಕಾಯಿದೆಯಡಿ ಸೋಮವಾರ ಮಧ್ಯರಾತ್ರಿ ಪುಣೆಯಲ್ಲಿ ಬಂಧಿಸಲಾಗಿತ್ತು.ಮಾರ್ಚ್ 7ರಿಂದ ಬಂಧನದಲ್ಲಿರುವ ಹಸನ್ ಅಲಿ ಸ್ವಿಸ್ ಬ್ಯಾಂಕುಗಳಲ್ಲಿ 36 ಸಾವಿರ ಕೋಟಿ ರೂಪಾಯಿ ಇರಿಸಿರುವ ಅಂದಾಜಿದ್ದು, ರಾಷ್ಟ್ರದ ಬೊಕ್ಕಸಕ್ಕೆ 40,000 ಕೋಟಿ ರೂಪಾಯಿ ತೆರಿಗೆ ವಂಚಿಸಿರುವ ಆರೋಪಕ್ಕೆ ಸಿಲುಕಿದ್ದಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.