ರಾಯ್‌ಪುರ/ನವದೆಹಲಿ (ಪಿಟಿಐ): ಸುಕ್ಮಾ ಜಿಲ್ಲೆಯ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರ ಬಿಡುಗಡೆಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸರ್ಕಾರ ಮತ್ತು ಮಾವೊವಾದಿಗಳ ಪರ ಸಂಧಾನಕಾರರು ಗುರುವಾರ ಮೊದಲ ಸುತ್ತಿನ ಮಾತುಕತೆ ನಡೆಸಿದರು.
ಅಲೆಕ್ಸ್ ಅವರಿಗೆ ಅಸ್ತಮಾ ಔಷಧಿಯನ್ನು ತಲುಪಿಸಿದ ವಿಶೇಷ ಪ್ರತಿನಿಧಿಯು ಸಂಧಾನಕಾರರಿಗೆ ಅಲೆಕ್ಸ್ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.
ಇಬ್ಬರು ಮಹಿಳೆಯರು ಸೇರಿದಂತೆ ಜೈಲಿನಲ್ಲಿರುವ ಎಂಟು ಮಂದಿ ಮಾವೊವಾದಿಗಳನ್ನು ಬಿಡುಗಡೆ ಮಾಡಬೇಕು, ನಕ್ಸಲರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಮತ್ತು ಮೆನನ್ ಬಿಡುಗಡೆಗಾಗಿ ಬಸ್ತಾರ್ ವಲಯಕ್ಕೆ ಪೊಲೀಸ್ ಪಡೆಯನ್ನು ಕಳುಹಿಸಬಾರದು ಎಂಬುದು ಮಾವೊವಾದಿಗಳ ಬೇಡಿಕೆ ಆಗಿದೆ.
ಅಪಹರಣಕಾರರ ಪರ ಸಂಧಾನಕಾರರು ಸರ್ಕಾರ ನೇಮಿಸಿರುವ ಸಂಧಾನಕಾರರನ್ನು ಇಲ್ಲಿಯ ಅತಿಥಿ ಗೃಹದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕಾನೂನು ತಜ್ಞರು ಸಹ ಹಾಜರಿದ್ದರು.
ಮಧ್ಯಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ನಿರ್ಮಲಾ ಬುಚ್ ಮತ್ತ ಛತ್ತೀಸ್‌ಗಡದ ಮಾಜಿ ಮುಖ್ಯ ಕಾರ್ಯದರ್ಶಿ ಎಸ್. ಕೆ. ಮಿಶ್ರಾ ಅವರನ್ನು ಸರ್ಕಾರ ಸಂಧಾನಕಾರರನ್ನಾಗಿ ನೇಮಿಸಿದೆ. ಮಾವೊವಾದಿಗಳು ಪರಿಶಿಷ್ಟ ಜಾತಿ/ಪಂಗಡಗಳ ರಾಷ್ಟ್ರೀಯ ಆಯೋಗದ ಮಾಜಿ ಅಧ್ಯಕ್ಷ ಬಿ. ಡಿ. ಶರ್ಮಾ ಮತ್ತು ಪ್ರೊ. ಜಿ. ಹರ್‌ಗೋಪಾಲ್ ಅವರನ್ನು ತಮ್ಮ ಸಂಧಾನಕಾರರೆಂದು ಸೂಚಿಸಿದ್ದಾರೆ.
ಮೆನನ್ ಆರೋಗ್ಯ ಸ್ಥಿರವಾಗಿದ್ದು, ಶೀಘ್ರ ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಆಸ್ತಮ ಔಷಧಿಯನ್ನು ತಲುಪಿಸಿ ಬಂದಿರುವ ಮನೀಷ್ ಕುಂಜಮ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.