ADVERTISEMENT

ಜೆಪಿಸಿ ತನಿಖೆಗೆ ಸಮ್ಮತಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST


ನವದೆಹಲಿ (ಪಿಟಿಐ): ಫೆಬ್ರುವರಿ 21ರಿಂದ ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸುಗಮ ಕಲಾಪ ನಡೆಸುವುದಕ್ಕಾಗಿ 2 ಜಿ ಹಗರಣ ಕುರಿತ ಜಂಟಿ ಸಂಸದೀಯ ತನಿಖೆಗೆ (ಜೆಪಿಸಿ ತನಿಖೆ) ಸರ್ಕಾರ ಒಪ್ಪಿಕೊಳ್ಳುವ ಸಾಧ್ಯತೆ ಇದೆ.

ಚಳಿಗಾಲದ ಅಧಿವೇಶನದಂತೆ ಬಜೆಟ್ ಅಧಿವೇಶನವೂ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮಂಗಳವಾರ ನಡೆಸಿದ ಸರ್ವಪಕ್ಷಗಳ ಸಭೆಯಲ್ಲಿ ಜೆಪಿಸಿ ತನಿಖೆ ನಡೆಸಲು ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತೆಂದು ಪ್ರತಿಪಕ್ಷಗಳ ಮುಖಂಡರು ಹೇಳಿದ್ದಾರೆ.

‘ಯುಪಿಎ ಸರ್ಕಾರದ ಮೈತ್ರಿ ಪಕ್ಷಗಳು ಕೂಡ ಜೆಪಿಸಿ ತನಿಖೆಗೆ ತಮ್ಮದೇನೂ ಆಕ್ಷೇಪವಿಲ್ಲ ಎಂದಿವೆ. ಹೀಗಾಗಿ ಸರ್ಕಾರ ಜೆಪಿಸಿ ತನಿಖೆಗೆ ಒಪ್ಪಿ ಕಲಾಪ ನಡೆಸಲು ಅನುಕೂಲ ಮಾಡಿಕೊಡಬಹುದು’ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಸಭೆಯ ನಂತರ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯ ನೇತೃತ್ವ ವಹಿಸಿದ್ದ ಲೋಕಸಭಾ ಮುಖಂಡರಾದ ಪ್ರಣವ್ ಮುಖರ್ಜಿ ನಡೆದ ಮಾತುಕತೆ ಕುರಿತು ಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವ ಬೆಲೆ ತೆತ್ತಾದರೂ ಸರಿ ಸದನದಲ್ಲಿ ಸುಗಮ ಕಲಾಪ ನಡೆಯುವ ವಾತಾವರಣ ನಿರ್ಮಿಸಬೇಕೆಂಬುದು ಪ್ರಣವ್ ಅಭಿಪ್ರಾಯವಾಗಿದೆ. ಪ್ರಧಾನಿ ಅವರೊಡನೆ ಚರ್ಚಿಸಿ ನಂತರ ಮುಂದಿನ ನಡೆ ಬಗ್ಗೆ ತಿಳಿಸುವುದಾಗಿ ಮುಖರ್ಜಿ ಭರವಸೆ ನೀಡಿದ್ದಾರೆ. ಫೆ.21ಕ್ಕೆ ಮುನ್ನ ಮತ್ತೊಂದು ಸರ್ವಪಕ್ಷ ಸಭೆ ನಡೆಯಲಿದೆ ಎಂದು ಪ್ರತಿಪಕ್ಷ ಮುಖಂಡರು ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾದ ಅರುಣ್ ಜೇಟ್ಲಿ ಮಾತನಾಡಿ, ಜೆಪಿಸಿ ತನಿಖೆ ನಡೆಯಬೇಕೆಂಬುದು ವಿರೋಧ ಪಕ್ಷಗಳ ಒಕ್ಕೊರಲ ಬೇಡಿಕೆಯಾಗಿದ್ದು, ಫೆ.21ರವರೆಗೂ ಈ ಒತ್ತಾಯದಲ್ಲಿ ಸಡಿಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಪಿಐನ ಗುರುದಾಸ್ ದಾಸಗುಪ್ತ ಕೂಡ ಬಜೆಟ್ ಅಧಿವೇಶನ ಸುಗಮವಾಗಿ ನಡೆಯುತ್ತದೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಲಾಪ ಸುಗಮವಾಗಿ ನಡೆಯಬೇಕು ಹಾಗೂ 2ಜಿ ತರಂಗಾಂತರ ಹಂಚಿಕೆ  ಹಗರಣದ ಬಗ್ಗೆ ಜಂಟಿ ಸಂಸದೀಯ ತನಿಖೆ ನಡೆಯಬೇಕು ಎಂಬ ಎರಡು ಅಭಿಪ್ರಾಯಗಳು ಸಭೆಯಲ್ಲಿ ಹೊರಹೊಮ್ಮಿದವು. ಕೇಂದ್ರ ಸರ್ಕಾರ ಈ ಕುರಿತ ಪ್ರಸ್ತಾವವನ್ನು ಸಿದ್ಧಪಡಿಸಬೇಕು ಎಂದು ಸಿಪಿಎಂ ಸಂಸದೀಯ ಪಕ್ಷದ ನಾಯಕ ಸೀತಾರಾಂ ಯೆಚೂರಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ಜೆಪಿಸಿ ತನಿಖೆಗೆ ಸಿದ್ಧವಿದೆ ಎಂದು ಈ ತಕ್ಷಣ ಹೇಳಲು ಸಾಧ್ಯವಿಲ್ಲ. ಆದರೆ ಈ ಕುರಿತ ಗೊತ್ತುವಳಿ ಮಂಡನೆಯಾದರೆ ಚರ್ಚೆಗೆ ಅವಕಾಶ ಕಲ್ಪಿಸಬಹುದು ಎಂದು ಸರ್ಕಾರದ ಮೂಲಗಳು ಅಭಿಪ್ರಾಯಪಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.