ADVERTISEMENT

ಜೈತಾಪುರ ಯೋಜನೆ: ಪರಿಸರ ಕಾಳಜಿ ಮರುಪರಿಶೀಲನೆ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST

ನವದೆಹಲಿ (ಐಎಎನ್‌ಎಸ್): ಜೈತಾಪುರ ಅಣು ವಿದ್ಯುತ್ ಘಟಕಕ್ಕೆ ಸಂಬಂಧಿಸಿದ ಪರಿಸರ ಕಾಳಜಿಗಳ ಬಗ್ಗೆ ಸರ್ಕಾರ ಮರುಪರಿಶೀಲನೆ ನಡೆಸಲಿದೆ ಎಂದು ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಮಂಗಳವಾರ ತಿಳಿಸಿದ್ದಾರೆ. ಜಪಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಬಳಿಕ ಉಂಟಾದ ಸುನಾಮಿಯಿಂದ ಅಲ್ಲಿನ ಪರಮಾಣು ಸ್ಥಾವರಗಳು ಅಪಾಯಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಅಣು ಸುರಕ್ಷಾ ವ್ಯವಸ್ಥೆಯನ್ನು ಪರಾಮರ್ಶೆಗೆ ಒಳಪಡಿಸಬೇಕೆಂದು ಕರೆ ನೀಡಿರುವ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

‘ಭಾರತ ಅಣು ವಿದ್ಯುತ್ ನಿಗಮಕ್ಕೆ (ಎನ್‌ಪಿಸಿಐಎಲ್) ಪ್ರಧಾನಿ ಇಂತಹ ಸೂಚನೆ ನೀಡಿದ್ದಾರೆ. ನಿಗಮದ ತಾಂತ್ರಿಕ ಪರಾಮರ್ಶೆಯನ್ನು ಆಧರಿಸಿ ಅಣು ಸ್ಥಾವರಗಳೊಂದಿಗೆ ನಾವು ನಿಕಟ ಸಂಪರ್ಕದಲ್ಲಿರುತ್ತೇವೆ. ಪರಿಸರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸುರಕ್ಷಾ ಕ್ರಮ ಕೈಗೊಳ್ಳಬೇಕಾದ ಅಗತ್ಯ ಬಂದರೆ ಆ ಬಗ್ಗೆ ಮರು ಪರಿಶೀಲನೆ ನಡೆಸುತ್ತೇವೆ’ ಎಂದು ರಮೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಉದ್ದೇಶಿತ 9,900 ಮೆಗಾವಾಟ್ ಸಾಮರ್ಥ್ಯದ ಜೈತಾಪುರ್ ಅಣು ವಿದ್ಯುತ್ ಘಟಕದ ಸುರಕ್ಷೆಯ ಬಗೆಗಿನ ಆತಂಕಗಳನ್ನು ಅಣು ಶಕ್ತಿ ಆಯೋಗ ತಳ್ಳಿಹಾಕಿದೆ. ಈ ಘಟಕ ಸಂಪೂರ್ಣ ಸುರಕ್ಷಿತವಾಗಿದ್ದು ಜಪಾನ್‌ನಲ್ಲಿ ಸಂಭವಿಸಿದಷ್ಟು ತೀವ್ರತೆಯ ಸುನಾಮಿಯನ್ನೂ ಎದುರಿಸಬಲ್ಲದು ಎಂದು ಭರವಸೆ ನೀಡಿದೆ. ದೇಶದ ಅಣು ವಿದ್ಯುತ್ ಜನರೇಟರ್‌ಗಳು ಸುರಕ್ಷಿತವಾಗಿವೆ ಎಂದು ಪ್ರಧಾನಿ ಸಹ ಸೋಮವಾರ ಆಶ್ವಾಸನೆ ಇತ್ತಿದ್ದರು.

‘ನಮ್ಮೆಲ್ಲ ಅಣು ವಿದ್ಯುತ್ ಘಟಕಗಳ ಸುರಕ್ಷಾ ವ್ಯವಸ್ಥೆ ಬಗ್ಗೆ ಕೂಡಲೇ ತಾಂತ್ರಿಕ ಪರಾಮರ್ಶೆ ನಡೆಸುವಂತೆ, ಅದರಲ್ಲೂ ಪ್ರಬಲ ಸುನಾಮಿ ಮತ್ತು ಭೂಕಂಪದಂತಹ ವಿಕೋಪಗಳನ್ನು ತಡೆಯಲು ಅವು ಸಮರ್ಥವಾಗಿವೆಯೇ ಎಂಬ ಬಗ್ಗೆ ನಿಗಾ ವಹಿಸುವಂತೆ ಅಣು ಶಕ್ತಿ ಆಯೋಗ ಸೇರಿದಂತೆ ಸಂಬಂಧಿಸಿದ ಎಲ್ಲ ಸಂಸ್ಥೆಗಳಿಗೂ ಸೂಚಿಸಲಾಗಿದೆ ಎಂದು ಪ್ರಧಾನಿ ಲೋಕಸಭೆಗೆ ತಿಳಿಸಿದರು.

ಯೋಜನೆಯಿಂದ ಹಿಂದಕ್ಕೆ: ಈ ಮಧ್ಯೆ, ದೀರ್ಘಕಾಲ ತಾಳಿಕೆ ಮತ್ತು ಖ್ಯಾತಿ ಕಾಯ್ದುಕೊಳ್ಳಬೇಕಾದ ಅಪಾಯದಿಂದಾಗಿ ಜರ್ಮನಿಯ ಕಾಮರ್ಸ್ ಬ್ಯಾಂಕ್ ‘ಜೈತಾಪುರ ಯೋಜನೆ’ಯಿಂದ ಹಿಂದೆ ಸರಿದಿದೆ; ಆದರೆ ಅದು ಜಪಾನ್‌ನ ವಿಪತ್ತಿಗಿಂತ ಮೊದಲೇ ಈ ನಿರ್ಧಾರಕ್ಕೆ ಬಂದಿತ್ತು ಎಂದು ಪರಿಸರಾತ್ಮಕ ಸರ್ಕಾರೇತರ ಸಂಸ್ಥೆಯಾದ ಗ್ರೀನ್‌ಪೀಸ್ ತಿಳಿಸಿದೆ. ಜರ್ಮನಿಯ 2ನೇ ಅತಿ ದೊಡ್ಡ ಬ್ಯಾಂಕ್ ಆದ ಕಾಮರ್ಸ್ ತನ್ನ ಈ ನಿರ್ಧಾರವನ್ನು ಇ- ಮೇಲ್ ಮೂಲಕ ಸಂಸ್ಥೆಗೆ ತಿಳಿಸಿರುವುದಾಗಿ ಗ್ರೀನ್‌ಪೀಸ್ ಹೇಳಿಕೆಯಲ್ಲಿ ವಿವರಿಸಿದೆ.

ಘಟಕದ ವಿಕಿರಣದಿಂದ ತಮಗೆ ತೊಂದರೆ ಉಂಟಾಗುತ್ತದೆ. ಅಲ್ಲದೆ ಪರಮಾಣು ತ್ಯಾಜ್ಯದ ಸಂಗ್ರಹ ಮತ್ತು ವಿಲೇವಾರಿಗೆ ಸರ್ಕಾರ ಯಾವುದೇ ಯೋಜನೆ ರೂಪಿಸಿಲ್ಲ. ಶ್ರೀಮಂತ ಜೈವಿಕ ವೈವಿಧ್ಯದ ರತ್ನಗಿರಿ ಜಿಲ್ಲೆಯನ್ನು ಸಂರಕ್ಷಿಸುವುದು ಹೇಗೆ ಎಂಬ ಬಗ್ಗೆಯೂ ಅದು ಯೋಚಿಸಿಲ್ಲ ಎಂದು ಆರೋಪಿಸಿ ಜೈತಾಪುರದ ಗ್ರಾಮಸ್ಥರು ಹಿಂದಿನಿಂದಲೂ ಯೋಜನೆಯನ್ನು ಪ್ರತಿಭಟಿಸುತ್ತಲೇ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.