ADVERTISEMENT

ಜೈನ ಸಾಹಿತ್ಯದಲ್ಲಿ ಸಾವಿನ ಸಾಮೀಪ್ಯದ ಮಾಹಿತಿ ಇದೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 19:46 IST
Last Updated 14 ಜುಲೈ 2017, 19:46 IST
ರಾಜ್ಯಸಭೆ ಸದಸ್ಯ ಡಾ.ಅಭಿಷೇಕ್‌ ಮನು ಸಿಂಘ್ವಿ ಅವರು ನವದೆಹಲಿಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ‘ಇನ್ವೈಟಿಂಗ್‌ ಡೆತ್‌’ ಹಾಗೂ ‘ಪರ್ಸ್ಯೂಯಿಂಗ್‌ ಡೆತ್‌’ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಲೇಖಕ ಷ.ಶೆಟ್ಟರ್‌, ಸುಧಾಮಹಿ ರೇಗುನಾಥನ್‌, ಜಿತೇಂದ್ರ ಷಾ ಚಿತ್ರದಲ್ಲಿದ್ದಾರೆ
ರಾಜ್ಯಸಭೆ ಸದಸ್ಯ ಡಾ.ಅಭಿಷೇಕ್‌ ಮನು ಸಿಂಘ್ವಿ ಅವರು ನವದೆಹಲಿಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ‘ಇನ್ವೈಟಿಂಗ್‌ ಡೆತ್‌’ ಹಾಗೂ ‘ಪರ್ಸ್ಯೂಯಿಂಗ್‌ ಡೆತ್‌’ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಲೇಖಕ ಷ.ಶೆಟ್ಟರ್‌, ಸುಧಾಮಹಿ ರೇಗುನಾಥನ್‌, ಜಿತೇಂದ್ರ ಷಾ ಚಿತ್ರದಲ್ಲಿದ್ದಾರೆ   

ನವದೆಹಲಿ: ಎಲ್ಲ ಕಾಲದಲ್ಲೂ ಕುತೂಹಲ ಮತ್ತು ಭಯವನ್ನು ಉಳಿಸಿಕೊಂಡು ಬಂದಿರುವ ಸಾವಿನ ಕುರಿತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾವಿರಾರು ಗ್ರಂಥಗಳು ರಚಿತವಾಗಿವೆ. ಆದರೆ, ಸಾವನ್ನು ಪ್ರೀತಿಸುವ ಹಾಗೂ ಅದರ ಸಾಮೀಪ್ಯವನ್ನು ಬಯಸುವ ಪದ್ಧತಿಯ ಕುರಿತು ಜೈನ ಸಾಹಿತ್ಯ ಹೇಳಿದೆ ಎಂದು ಇತಿಹಾಸಕಾರ ಷ.ಶೆಟ್ಟರ್‌ ತಿಳಿಸಿದರು.

ಇಲ್ಲಿನ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಶುಕ್ರವಾರ ಸಂಜೆ ನಡೆದ ‘ಇನ್ವೈಟಿಂಗ್‌ ಡೆತ್‌’ ಹಾಗೂ ‘ಪರ್ಸ್ಯೂಯಿಂಗ್‌ ಡೆತ್‌’ ಪುಸ್ತಕಗಳ ಪರಿಷ್ಕೃತ ಆವೃತ್ತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಲೇಖಕರಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಜೈನ ಧರ್ಮವು ಸಾವಿನ ಕುರಿತು ಅದ್ಭುತ ವ್ಯಾಖ್ಯಾನವನ್ನು ನೀಡಿದೆ. ಜೀವನದ ಮೌಲ್ಯಗಳ ಕುರಿತೂ ಅಷ್ಟೇ ಮೌಲ್ಯಯುತವಾದ ಕೊಡುಗೆಯನ್ನು ನೀಡಿದೆ. ವೈರಾಗ್ಯಕ್ಕೆ ಒಳಗಾಗಿ ಸಾವನ್ನು ಅಪ್ಪಿಕೊಳ್ಳುವ ‘ಮರಣ ಕಲ್ಪನೆ’ಯೇ ವಿಭಿನ್ನವಾದದ್ದು. ಅದನ್ನು ಆಚರಣೆಯಲ್ಲಿ ಇರಿಸಿಕೊಂಡು ಬಂದಿರುವ ಜೈನ ಧರ್ಮೀಯರು ಇಂಗಿಣಿ, ಸಲ್ಲೇಖನ, ಸನ್ಯಾಸನ, ಸಮಾಧಿ, ಆರಾಧನಾ, ಸಂಧಾರಾ ಎಂಬ ಹೆಸರುಗಳಿಂದ ಕರೆಸಿಕೊಂಡಿರುವ ಈ ಪದ್ಧತಿಯನ್ನು ಅನುಸರಿಸುತ್ತ ಬಂದಿದ್ದಾರೆ. ಆ ಪ್ರಕ್ರಿಯೆಯ ಕುರಿತು ಬೆಳಕು ಚೆಲ್ಲುವುದೇ ಈ ಕೃತಿಯ ಉದ್ದೇಶವಾಗಿದೆ ಎಂದರು.

ADVERTISEMENT

ಕ್ರಿಸ್ತಪೂರ್ವ 3ನೇ ಶತಮಾನದಿಂದ ಕ್ರಿಸ್ತಶಕ 16ನೇ ಶತಮಾನದವರೆಗೆ ಭಾರತದಲ್ಲಿ ಕೈಗೊಳ್ಳಲಾದ ಸಲ್ಲೇಖನದ ಕುರಿತು ಕಾವ್ಯಗಳಲ್ಲಿ, ಶಾಸನಗಳಲ್ಲಿ ಉಲ್ಲೇಖಗಳಿವೆ. ರನ್ನ, ಪೊನ್ನ, ಪಂಪ, ಬಂಧುವರ್ಮ ಸೇರಿದಂತೆ ಅನೇಕ ಜೈನ ಸಾಹಿತಿಗಳು ತಮ್ಮ ಕಾವ್ಯಗಳಲ್ಲಿ ಈ ಪದ್ಧತಿಯ ಕುರಿತು ವಿವರಿಸಿದ್ದಾರೆ ಎಂದು ಅವರು ವಿವರಿಸಿದರು.

ಸಾವನ್ನಪ್ಪುವುದು, ಆಹ್ವಾನಿಸುವುದು ಎಂದ ತಕ್ಷಣ ಆತ್ಮಹತ್ಯೆಯ ಪ್ರಶ್ನೆ ಉದ್ಭವಿಸುತ್ತದೆ. ಸಲ್ಲೇಖನವು ಆತ್ಮಹತ್ಯೆಯೇ ಎಂಬ ಚರ್ಚೆಗಳೂ ಸಾಕಷ್ಟು ಪ್ರಮಾಣದಲ್ಲಿ ನಡೆದಿವೆ. ಹಿಂಸೆಯಿಂದ ಕೂಡಿರದ, ನಿಕೃಷ್ಟವಾಗಿರದ, ಗೌರವಯುತವಾಗಿ ಸಾವನ್ನು ಸ್ವೀಕರಿಸುವುದೇ ಸಲ್ಲೇಖನವಾಗಿದೆ ಎಂದರು.
16ನೇ ಶತಮಾನದವರೆಗೂ ದೇಶದಾದ್ಯಂತ ಬಹುಸಂಖ್ಯಾತರಾಗಿದ್ದ ಜೈನ ಧರ್ಮೀಯರು ಕಾಲಾಂತರದಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಆದರೆ, ಸಹಬಾಳ್ವೆ, ಅಹಿಂಸೆ, ಶಾಂತಿಯ ಮಹತ್ವದ ಕುರಿತು ಜಗತ್ತಿಗೆ ಸಾರಿ ಹೇಳಿರುವ ಜೈನ ಸಾಹಿತ್ಯವು  ಮೇಲ್ಪಂಕ್ತಿಯಲ್ಲಿದೆ ಎಂದು ಪುಸ್ತಕ ಬಿಡುಗಡೆ ಮಾಡಿದ ರಾಜ್ಯಸಭೆ ಸದಸ್ಯ ಡಾ.ಅಭಿಷೇಕ್‌ ಮನು ಸಿಂಘ್ವಿ ತಿಳಿಸಿದರು.

‘ಸಲ್ಲೇಖನ ಇಚ್ಛಾಮರಣವೇ ಎಂಬ ಚರ್ಚೆಗಳೂ ನಡೆದಿವೆ. ಇದು ಆತ್ಮಹತ್ಯೆ ಎಂಬ ಶಂಕೆಯನ್ನೂ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ಪದ್ಧತಿಯು ಆತ್ಮಹತ್ಯೆಯಲ್ಲ ಎಂಬುದನ್ನು ಸಾರಲು ನಾವು ಷ.ಷಟ್ಟರ್‌ ಅವರ ಈ ಕೃತಿಗಳನ್ನೂ ನ್ಯಾಯಾಲಯಕ್ಕೆ ಒದಗಿಸಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.