ADVERTISEMENT

ಜೈಲಿನಲ್ಲಿ ರಾಜಾ ಸಾಮಾನ್ಯ ಕೈದಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 17:35 IST
Last Updated 21 ಫೆಬ್ರುವರಿ 2011, 17:35 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದ ಸಂಬಂಧ ಸಿಬಿಐ ಬಂಧಿಸಿರುವ ಕೇಂದ್ರದ ಮಾಜಿ ಸಚಿವ ಎ.ರಾಜಾ ಅವರಿಗೆ ಇಲ್ಲಿನ ತಿಹಾರ್ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ನೀಡಿಲ್ಲ ಎಂದು ಜೈಲು ಅಧಿಕಾರಿಗಳು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಈ ತಿಂಗಳ 17ರಿಂದ ರಾಜಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಅವಧಿಯಲ್ಲಿ ಅವರನ್ನು ಅನುಮಾನಾಸ್ಪದ ಅಥವಾ ಹೊರಗಿನ ಯಾವ ವ್ಯಕ್ತಿಯೂ ಭೇಟಿಯಾಗಿಲ್ಲ ಎಂದು ಬಂದೀಖಾನೆ ಮಹಾ ನಿರ್ದೇಶಕ  ನೀರಜ್ ಕುಮಾರ್ ತಿಳಿಸಿದ್ದಾರೆ. |

ಅನಧಿಕೃತ ವ್ಯಕ್ತಿಗಳಾಗಲೀ, ತಮಿಳುನಾಡು ಪೊಲೀಸರಾಗಲೀ ರಾಜಾ ಅವರ ಪರವಾಗಿ ಜೈಲಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಅವರು ತಿಳಿಸಿದರು. ಬೇರೆ ಬೇರೆ ವಾರ್ಡ್‌ಗಳಲ್ಲಿ ಇರಿಸಲಾಗಿರುವ ಕೈದಿಗಳು ಪರಸ್ಪರ ಮಾತನಾಡಲು ಸಾಧ್ಯವಾಗದ ರೀತಿ ಗೋಡೆಗಳು ಎತ್ತರ ಮತ್ತು ದಪ್ಪಗಾಗಿಯೇ ಇವೆ ಎಂದರು.

ರಾಜಾ ಅವರನ್ನು ಇತರ ಕೈದಿಗಳಿಂದ ಪ್ರತ್ಯೇಕಿಸಲಾಗಿದೆ. ಸಾಮಾನ್ಯರಂತೆ ಅವರೂ ನೆಲದ ಮೇಲೇ ಮಲಗಬೇಕಿದೆ. ಹಾಸಲು ಏಳು ಹಾಸುಗಳನ್ನಷ್ಟೇ ನೀಡಲಾಗಿದೆ. ಇವೆಲ್ಲಾ ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿಯೇ ಇವೆ. ಅವರನ್ನು ಭೇಟಿ ಮಾಡಲು, ಗಣ್ಯರಂತೆ ಸೌಲಭ್ಯ ನೀಡಬೇಕು ಎಂದಿದ್ದರೆ ಲಿಖಿತ ಆದೇಶ ಲಭಿಸಬೇಕು ಎಂದು ನೀರಜ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.