ADVERTISEMENT

ಜ್ಯೋತಿರ್ಮಯ್ ಡೇ ಹತ್ಯೆ ಮುಂಚೆ ದಾವುದ್ ಸಹಚರನ ಭೇಟಿ ಸಾಧ್ಯತೆ!

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 12:30 IST
Last Updated 16 ಅಕ್ಟೋಬರ್ 2011, 12:30 IST

ಮುಂಬೈ (ಪಿಟಿಐ): ~ಹತ್ಯೆಯಾದ ಹಿರಿಯ ತನಿಖಾ ಪತ್ರಕರ್ತ ಜ್ಯೋತಿರ್ಮಯ್ ಡೇ ಅವರು ಭೂಗತ ಪಾತಕಿ ದಾವುದ್ ಇಬ್ರಾಹಿಂನ ಮುಖ್ಯ ಸಹಚರ ಇಕ್ಬಾಲ್ ಮಿರ್ಚಿಯನ್ನು ಏಪ್ರಿಲ್ ತಿಂಗಳಲ್ಲಿ ಲಂಡನ್‌ನಲ್ಲಿ ಭೇಟಿಯಾಗಿರುವ ಸಾಧ್ಯತೆಗಳಿವೆ~ ಎಂದು ತನಿಖೆ ನಡೆಸುತ್ತಿರುವ ಮುಂಬೈ ಪೋಲಿಸರು ಭಾನುವಾರ ತಿಳಿಸಿದ್ದಾರೆ.

ಡೇ ಹತ್ಯೆ ಪ್ರಕರಣದಲ್ಲಿ ಇಕ್ಬಾಲ್ ಮಿರ್ಚಿ ಪಾತ್ರವಿರುವುದು ಬೆಳಕಿಗೆ ಬಂದಿದೆ. ಇದೇ ಸಂದರ್ಭದಲ್ಲಿ ವಿದೇಶಗಳಲ್ಲಿ ದಾವುದ್‌ನ  ನಡೆಸುತ್ತಿರುವ ಇತರ ಚಟುವಟಿಕೆಗಳ ಮೇಲೆಯೂ ತನಿಖೆ ನಡೆಸುತ್ತಿರುವುದಾಗಿ ಅಪರಾಧ ವಿಭಾಗದ ಅಧಿಕೃತ ಮೂಲಗಳು ಹೇಳಿವೆ.

ಡೇ ಲಂಡನ್ ಪ್ರವಾಸದ ಸಮಯದಲ್ಲಿ ಇಕ್ಬಾಲ್ ಮಿರ್ಚಿ ಅಲಿಯಾಸ್ ಇಕ್ಬಾಲ್ ಮೆಮನ್‌ನ್ನು ಸಂಪರ್ಕಿಸಿರುವ ಬಗ್ಗೆ ಆರೋಪಿಗಳನ್ನು ಪ್ರಶ್ನಿಸಲಾಗಿದೆ. 

ADVERTISEMENT

ಕೊಲೆಯಾದ ಡೇ ಏಪ್ರಿಲ್ ತಿಂಗಳ ಅವಧಿಯಲ್ಲಿ ಕೈಗೊಂಡಿದ್ದ ಯೂರೋಪ್ ಪ್ರವಾಸ ಸಮಯದಲ್ಲಿ ಲಂಡನ್‌ನಲ್ಲಿ ಬಂಧನಕೊಳಗಾಗಿರುವ ಇಕ್ಬಾಲ್ ಮಿರ್ಚಿಯನ್ನು  ಸಂಪರ್ಕಿಸಿರುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.


ಹತ್ಯೆಗೊಳಗಾದ ಡೇ ಅವರು ದಾವುದ್ ಸಹಚರನನ್ನು ಭೇಟಿಯಾಗಿ ಆತನಿಂದ ಕೆಲವು ಮಾಹಿತಿಗಳನ್ನು ಕಲೆ ಹಾಕಿರಬಹುದು ಎಂದು ಚಿಂತಿಸಿದ ಚೋಟಾ ರಾಜನ್ ತನ್ನ ಸಹಚರರಿಗೆ ಡೇ ಕೊಲೆ ಮಾಡಿಸಿರಬಹುದು ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಇಂಗ್ಲಿಷ್ ಟ್ಯಾಬ್ಲಾಯ್ಡ ಮಿಡ್ ಡೇಯಲ್ಲಿ ವರದಿಗಾರರಾಗಿ ಡೇ ಕಾರ್ಯನಿರ್ವಹಿಸುತ್ತಿದ್ದರು. ಮೋಟಾರ್‌ ಸೈಕಲ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಡೇ ಅವರನ್ನು ಜೂನ್ 11 ರಂದು ಕೊಲೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.