ನವದೆಹಲಿ (ಪಿಟಿಐ): ಮಾಜಿ ಸೇನಾ ದಂಡನಾಯಕ ಜನರಲ್ ವಿ.ಕೆ. ಸಿಂಗ್ ಅವರು ~ಟಟ್ರಾ ಟ್ರಕ್ ವ್ಯವಹಾರದಲ್ಲಿ 600 ಟ್ರಕ್ ಗಳಿಗೆ ಸಂಬಂಧಿಸಿದಂತೆ ತಮಗೆ 14 ಕೋಟಿ ರೂಪಾಯಿಗಳ ಲಂಚದ ಆಮಿಷ ಒಡ್ಡಲಾಗಿತ್ತು~ ಎಂಬುದಾಗಿ ಬಹಿರಂಗಗೊಳಿಸಿದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶಿಫಾರಸಿನ ಮೇರೆಗೆ ಬಿಇಎಂಎಲ್ ಮುಖ್ಯಸ್ಥ ವಿ.ಆರ್.ಎಸ್. ನಟರಾಜನ್ ಅವರನ್ನು ರಕ್ಷಣಾ ಸಚಿವಾಲಯವು ಸೋಮವಾರ ಅಮಾನತುಗೊಳಿಸಿತು.
ರಕ್ಷಣಾ ಸಚಿವಾಲಯದ ಅನುಮತಿ ಇಲ್ಲದೆ ಜನರಲ್ ವಿ.ಕೆ. ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಕ್ಕಾಗಿ ಷೋಕಾಸ್ ನೋಟಿಸ್ ಜಾರಿಗೊಳಿಸಿದ ಕೆಲವು ದಿನಗಳ ಬಳಿಕ ರಕ್ಷಣಾ ಸಚಿವಾಲಯವು ಈ ಕ್ರಮ ಕೈಗೊಂಡಿದೆ.
~ಸರ್ಕಾರವು ಬಿಎಎಂಎಲ್ ಸಿಎಂಡಿ ವಿ.ಆರ್.ಎಸ್. ನಟರಾಜನ್ ಅವರನ್ನು ಸಿಬಿಐ ಶಿಫಾರಸಿನ ಮೇರೆಗೆ ಅಮಾನತಿನಲ್ಲಿ ಇರಿಸಿದೆ. ಪ್ರಾಮಾಣಿಕ ತನಿಖೆಯ ಖಾತರಿಗಾಗಿ ನಟರಾಜನ್ ಅವರನ್ನು ಹುದ್ದೆಯಿಂದ ದೂರದಲ್ಲಿ ಇರಿಸಬೇಕು ಎಂಬುದಾಗಿ ಸಿಬಿಐ ಶಿಫಾರಸು ಮಾಡಿತ್ತು.
ನಟರಾಜನ್ ವಿರುದ್ಧದ ವಿವಿಧ ಆಪಾದನೆಗಳ ಬಗ್ಗೆ ಸಿಬಿಐ ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು ರಕ್ಷಣಾ ಸಚಿವಾಲಯ ವಕ್ತಾರ ಸಿತಾಂಶು ಕರ್ ಇಲ್ಲಿ ತಿಳಿಸಿದರು.
ಸಿಎಂಡಿ ಉಸ್ತುವಾರಿಯನ್ನು ಬಿಇಎಂಎಲ್ ನ ಹಿರಿಯ ನಿರ್ದೇಶಕ ಪಿ. ದ್ವಾರಕಾನಾಥ್ ಅವರಿಗೆ ನೀಡಲಾಗಿದೆ ಎಂದು ಅವರು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.