ADVERTISEMENT

ಡಾರ್ಜಲಿಂಗ್‌ನಲ್ಲಿ ಯುವಕನ ಹತ್ಯೆ: ಉದ್ವಿಗ್ನ ಪರಿಸ್ಥಿತಿ

ಏಜೆನ್ಸೀಸ್
Published 8 ಜುಲೈ 2017, 9:24 IST
Last Updated 8 ಜುಲೈ 2017, 9:24 IST
ಪ್ರತ್ಯೇಕ ಗೋರ್ಖಾಲ್ಯಾಂಡ್‌ಗಾಗಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಗೋರ್ಖಾ ಜನಮುಕ್ತಿ ಮೋರ್ಚಾ ಬೆಂಬಲಿಗ ಮಹಿಳೆಯೊಬ್ಬರು ಪಕ್ಷದ ಧ್ವಜ ಹಿಡಿದು ನಿಂತಿರುವುದು (ಎಎಫ್‌ಪಿ ಚಿತ್ರ)
ಪ್ರತ್ಯೇಕ ಗೋರ್ಖಾಲ್ಯಾಂಡ್‌ಗಾಗಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಗೋರ್ಖಾ ಜನಮುಕ್ತಿ ಮೋರ್ಚಾ ಬೆಂಬಲಿಗ ಮಹಿಳೆಯೊಬ್ಬರು ಪಕ್ಷದ ಧ್ವಜ ಹಿಡಿದು ನಿಂತಿರುವುದು (ಎಎಫ್‌ಪಿ ಚಿತ್ರ)   

ಡಾರ್ಜಲಿಂಗ್: ಪ್ರತ್ಯೇಕ ಗೋರ್ಖಾಲ್ಯಾಂಡ್‌ಗಾಗಿ ಇಲ್ಲಿ ನಡೆಯುತ್ತಿರುವ ಪ್ರತಿಭಟನೆ ಶನಿವಾರ 24ನೇ ದಿನಕ್ಕೆ ಕಾಲಿಟ್ಟಿದ್ದು, ಯುವಕನೊಬ್ಬನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಆರೋಪಿಸಿದೆ.

ಮೃತ ಯುವಕನನ್ನು ಗೋರ್ಖಾ ನ್ಯಾಷನಲ್ ಲಿಬರೇಷನ್ ಫ್ರಂಟ್‌ನ ಬೆಂಬಲಿಗ ತಾಶಿ ಭುಟಿಯಾ ಎಂದು ಗುರುತಿಸಲಾಗಿದೆ. ಘಟನೆಯಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗೋರ್ಖಾಲ್ಯಾಂಡ್‌ ಬೆಂಬಲಿಗರು ಬೀದಿಗಿಳಿದು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ್ದಾರೆ.

ಭುಟಿಯಾ ಅವರು ಶುಕ್ರವಾರ ತಡರಾತ್ರಿ 12.30ರ ವೇಳೆ ಮನೆಗೆ ಮರಳುತ್ತಿದ್ದಾಗ ದಾಳಿ ನಡೆದಿದೆ ಎನ್ನಲಾಗಿದೆ. ಆದರೆ, ಗುಂಡಿನ ದಾಳಿ ನಡೆಸಿದ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಘಟನೆಗೆ ಸಂಬಂಧಿಸಿ ಗೋರ್ಖಾ ಜನಮುಕ್ತಿ ಮೋರ್ಚಾ ಹಾಗೂ ಇತರ ಕೆಲವು ರಾಜಕೀಯ ಪಕ್ಷಗಳು ಪೊಲೀಸರಿಗೆ ದೂರು ನೀಡಿವೆ.

ADVERTISEMENT

ಈ ಮಧ್ಯೆ, ‘ಪೊಲೀಸರು ಗುಂಡಿನ ದಾಳಿ ನಡೆಸಿದ ಬಗ್ಗೆ ಇದುವರೆಗೂ ನಮಗೆ ಯಾವುದೇ ವರದಿ ಬಂದಿಲ್ಲ. ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಮಾಹಿತಿ ನೀಡಲಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ವಿನಾ ಕಾರಣ ಯುವಕನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಆತನ ದೇಹದಲ್ಲಿ ಗುಂಡೇಟು ತಗುಲಿದ ಗಾಯಗಳು ಕಂಡುಬಂದಿವೆ. ತಪ್ಪಿತಸ್ಥ ಪೊಲೀಸರಿಗೆ ಶಿಕ್ಷೆಯಾಗಬೇಕು’ ಎಂದು ಗೋರ್ಖಾ ಜನಮುಕ್ತಿ ಮೋರ್ಚಾ ನಾಯಕ ವಿನಯ್ ತಮಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.