ADVERTISEMENT

ಡಾರ್ಜಿಲಿಂಗ್‌ನಿಂದ ಸೇನೆ ವಾಪಸ್‌ಗೆ ‘ಸುಪ್ರೀಂ’ ಒಪ್ಪಿಗೆ

ಪಿಟಿಐ
Published 27 ಅಕ್ಟೋಬರ್ 2017, 19:26 IST
Last Updated 27 ಅಕ್ಟೋಬರ್ 2017, 19:26 IST
ಡಾರ್ಜಿಲಿಂಗ್‌ನಿಂದ ಸೇನೆ ವಾಪಸ್‌ಗೆ ‘ಸುಪ್ರೀಂ’ ಒಪ್ಪಿಗೆ
ಡಾರ್ಜಿಲಿಂಗ್‌ನಿಂದ ಸೇನೆ ವಾಪಸ್‌ಗೆ ‘ಸುಪ್ರೀಂ’ ಒಪ್ಪಿಗೆ   

ನವದೆಹಲಿ: ಪ್ರತ್ಯೇಕ ಗೋರ್ಖಾಲ್ಯಾಂಡ್‌ಗಾಗಿ ಹೋರಾಟ ನಡೆಯುತ್ತಿರುವ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮತ್ತು ಕಲಿಂಪಾಂಗ್‌ ಜಿಲ್ಲೆಗಳಲ್ಲಿ  ನಿಯೋಜಿಸಿರುವ ಕೇಂದ್ರೀಯ ಸಶಸ್ತ್ರ ಅರೆಸೇನಾ ಪಡೆಯ (ಸಿಎಪಿಎಫ್‌) 15 ತುಕಡಿಗಳಲ್ಲಿ ಏಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ. ಈ ತುಕಡಿಗಳನ್ನು ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ನಡೆಯಲಿರುವ ಚುನಾವಣಾ ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತದೆ.

ಪಶ್ಚಿಮ ಬಂಗಾಳದಲ್ಲೇ ಈ 15 ತುಕಡಿಗಳನ್ನು ಉಳಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶ ನೀಡಿತ್ತು. ಈ ಬಗ್ಗೆ ಕೇಂದ್ರ ಸಲ್ಲಿಸಿರುವ ಮನವಿಗೆ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪೀಠವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ತಿಳಿಸಿದೆ.

ಡಾರ್ಜಿಲಿಂಗ್‌ನ ಗುಡ್ಡಗಾಡು ಪ್ರದೇಶದಿಂದ ಸಿಎಪಿಎಫ್‌ ಅನ್ನು ಹಿಂದಕ್ಕೆ ‍ಕರೆಸಿಕೊಳ್ಳುವುದಕ್ಕೆ ಕಲ್ಕತ್ತಾ ಹೈಕೋರ್ಟ್‌ ತಡೆ ನೀಡಿತ್ತು. ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ಹೋರಾಟದ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಅಕ್ಟೋಬರ್‌ 27ರವರೆಗೆ ಪಡೆಗಳು ಅಲ್ಲಿರಬೇಕು ಎಂದು ಹೇಳಿತ್ತು.

ADVERTISEMENT

ಜುಲೈ 14ರಂದು ಆದೇಶ ನೀಡಿದ್ದ ಹೈಕೋರ್ಟ್, ಪಶ್ಚಿಮ ಬಂಗಾಳದಲ್ಲಿ ಅದಾಗಲೇ ಇದ್ದ 11 ತುಕಡಿಗಳ ಜತೆಗೆ ಇನ್ನೂ ನಾಲ್ಕು ತುಕಡಿಗಳನ್ನು ಅಲ್ಲೇ ನಿಯೋಜನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.