ಲಖನೌ (ಪಿಟಿಐ): ಉತ್ತರ ಪ್ರದೇಶದ ಕನೌಜ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಪ್ರಮುಖ ಪ್ರತಿ ಪಕ್ಷ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಿರ್ಧರಿಸಿದೆ.ಈಗಾಗಲೇ ಕಾಂಗ್ರೆಸ್ ಪಕ್ಷ ಸ್ಪರ್ಧಿಸದಿರಲು ನಿರ್ಧರಿಸಿದೆ ಮತ್ತು ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ವಿಫಲವಾಗಿದ್ದಾರೆ.
ಹೀಗಾಗಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಅವರ ಗೆಲುವಿನ ಹಾದಿ ಸುಗಮವಾದಂತೆ ಆಗಿದೆ.ಎಸ್‌ಪಿ ಆಡಳಿತ ಚುಕ್ಕಾಣಿ ಹಿಡಿದ ಮೂರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಗಲಭೆ, ಅಪರಾಧ ಕೃತ್ಯಗಳು ಹೆಚ್ಚಾಗಿವೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ತಮ್ಮ ಮಗನಿಗೆ ಆರು ತಿಂಗಳ ಅವಕಾಶ ಕೊಡಿ ಎಂದು ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಜನತೆ ಮತ್ತು ಪ್ರತಿಪಕ್ಷಗಳಿಗೆ ಮನವಿ ಮಾಡುತ್ತಿದ್ದಾರೆ ಎಂದು ಬಿಎಸ್‌ಪಿ ವಕ್ತಾರ ವ್ಯಂಗ್ಯವಾಡಿದ್ದಾರೆ.
`ಎಸ್‌ಪಿ ತನ್ನ ಸ್ವಜನಪಕ್ಷಪಾತ ಸಂಪ್ರದಾಯವನ್ನು ಮುಂದುವರಿಸಿದ್ದು, ಡಿಂಪಲ್ ಯಾದವ್ ಅವರನ್ನು ಕನೌಜ್ ಉಪಚುನಾವಣೆಯಲ್ಲಿ ಕಣಕ್ಕಿಳಿಸಿದೆ. ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಡಿಂಪಲ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಈಗ ಹೇಳಲಾಗುತ್ತಿದೆ. ಆದರೆ ಸಮಾಜವಾದಿ ಪಕ್ಷದ `ಅಭಿವೃದ್ಧಿ~ಯ ಪರಿಕಲ್ಪನೆ ಏನು ಎಂಬುದು ಜನರಿಗೆ ಗೊತ್ತಿದೆ~ ಎಂದಿದ್ದಾರೆ.
`ತಮ್ಮ ಕುಟುಂಬದ ಏಳಿಗೆಯೇ ಅಭಿವೃದ್ಧಿ ಎಂದು ಎಸ್‌ಪಿ ಪರಿಗಣಿಸಿದೆ. ಆ ಪಕ್ಷದ ನೀತಿಯೂ ಅದೇ ಆಗಿದೆ. ಇದನ್ನು ಬಯಲಿಗೆಳೆಯಲು ಮತ್ತು ಮುಲಾಯಂ ಸಿಂಗ್ ಮಾಡಿರುವ ಮನವಿಯ ಹಿನ್ನೆಲೆಯಲ್ಲಿ ಬಿಎಸ್‌ಪಿಯು ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರಲು ನಿರ್ಧರಿಸಿದೆ ಎಂದು ಅವರು ವಿವರಿಸಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಬಿಜೆಪಿ ಅಭ್ಯರ್ಥಿ ಜಗದೇವ್ ಯಾದವ್ ನಾಮಪತ್ರ ಸಲ್ಲಿಸಲು ವಿಫಲರಾದರು.
ಬುಧವಾರ ಮಧ್ಯಾಹ್ನ 3 ಗಂಟೆ ಒಳಗಾಗಿ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ ಆ ನಿಗದಿತ ಅವಧಿ ಒಳಗಾಗಿ ಚುನಾವಣಾಧಿಕಾರಿ ಕಚೇರಿಗೆ ತಲುಪಲು ಯಾದವ್ ವಿಫಲರಾದರು.ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಹೊರತಾಗಿ ಸಂಯುಕ್ತ ಸಮಾಜವಾದಿ ಪಕ್ಷದ ದಶರಥ್ ಸಿಂಗ್ ಅವರು ಮಾತ್ರ ಚುನಾವಣಾ ಕಣದಲ್ಲಿದ್ದಾರೆ.ನಾಮಪತ್ರ ಹಿಂಪಡೆಯಲು ಜೂನ್ ಎಂಟು ಕೊನೆಯ ದಿನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.