ADVERTISEMENT

ತತ್ ಕ್ಷಣ ರಾಜೀನಾಮೆ ಕೊಡಿ: ಗಡ್ಕರಿಗೆ ರಾಮ್ ಜೇಠ್ಮಲಾನಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2012, 9:00 IST
Last Updated 6 ನವೆಂಬರ್ 2012, 9:00 IST

ನವದೆಹಲಿ (ಪಿಟಿಐ): ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರು ತತ್ ಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುವ ಮೂಲಕ ರಾಮ್ ಜೇಠ್ಮಲಾನಿ ಅವರು ಮಂಗಳವಾರ ಪಕ್ಷಾಧ್ಯಕ್ಷ ಗಡ್ಕರಿ ಅವರ ಮೇಲೆ ಇನ್ನಷ್ಟು ಒತ್ತಡ ಹೇರಿದ್ದಾರೆ. ಜಸ್ವಂತ್ ಸಿಂಗ್ ಮತ್ತು ಯಶವಂತ ಸಿನ್ಹ ಸೇರಿದಂತೆ ಇತರ ಮೂವರು ಹಿರಿಯ ನಾಯಕರೂ ತಮ್ಮ ಜೊತೆಗೆ ಇದ್ದಾರೆ ಎಂದೂ ಜೇಠ್ಮಲಾನಿ ಪ್ರತಿಪಾದಿಸಿದ್ದಾರೆ.

~ಜಸ್ವಂತ್ ಸಿಂಗ್, ಯಶವಂತ ಸಿನ್ಹ ಮತ್ತು ಶತ್ರುಘ್ನ ಸಿನ್ಹ (ಎಲ್ಲರೂ ಲೋಕಸಭಾ ಸದಸ್ಯರು) ಅವರ ಜೊತೆಗೆ ನಾನು ಸಂಪರ್ಕದಲ್ಲಿದ್ದೇನೆ. ನಾವೆಲ್ಲರೂ ಒಂದೇ ಹಾದಿಯಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ. ಅವರು ಹೇಗೆ ವರ್ತಿಸುವರು ಎಂದು ನಾನು ಭವಿಷ್ಯ ಹೇಳಲಾರೆ. ಪಕ್ಷದ ಅಧ್ಯಕ್ಷರು ತತ್ ಕ್ಷಣ ರಾಜೀನಾಮೆ ನೀಡಬೇಕಾದ ಅಗತ್ಯವಿದೆ ಎಂಬುದು ನಮ್ಮೆಲ್ಲರ ಸ್ಪಷ್ಟ ಅಭಿಪ್ರಾಯವಾಗಿದೆ~ ಎಂದು ಜೇಠ್ಮಲಾನಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

~ನನ್ನ ಹಾಗೂ ಇತರ ಮೂವರು ನಾಯಕರ ಪರವಾಗಿ ನಾನು ಗಡ್ಕರಿ ಮತ್ತು ಎಲ್.ಕೆ. ಅಡ್ವಾಣಿ ಅವರಿಗೆ ಪತ್ರ ಬರೆದಿದ್ದೇನೆ~ ಎಂದು ಹೇಳಿದ ಜೇಠ್ಮಲಾನಿ ವಿವರಗಳನ್ನು ನೀಡಲು ನಿರಾಕರಿಸಿದರು.

 ಗಡ್ಕರಿ ರಾಜೀನಾಮೆ ನೀಡಬೇಕು ಎಂದು ಕಳೆದ ತಿಂಗಳು ಜೇಠ್ಮಲಾನಿ ಅವರು ಮೊತ್ತ ಮೊದಲಿಗರಾಗಿ ಆಗ್ರಹಿಸಿದ್ದರು. ಗಡ್ಕರಿ ಮುಂದುವರಿಕೆಯಿಂದ 2014ರ ಲೋಕಸಭಾ ಚುನಾವಣೆಯಲ್ಲಿ ಹಾನಿ ಉಂಟಾಗಬಹುದಾದ ಕಾರಣ ಗಡ್ಕರಿ ಅವರಿಗೆ ಪಕ್ಷಾಧ್ಯಕ್ಷ ಸ್ಥಾನದಲ್ಲಿ ಎರಡನೇ ಅವಧಿಗೆ ಮುಂದುವರಿಯಲು ಅವಕಾಶ ನೀಡಬಾರದು ಎಂದು ಜೇಠ್ಮಲಾನಿ ಹೇಳಿದ್ದರು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸಭೆಯು ಇತ್ತೀಚೆಗೆ ಗಡ್ಕರಿ ಅವರಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲು ಅನುಕೂಲವಾಗುವಂತೆ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತಂದಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.