ADVERTISEMENT

ತನಿಖೆಗೆ ಬರಲಾಗದು: ನೀರವ್‌

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 20:17 IST
Last Updated 28 ಫೆಬ್ರುವರಿ 2018, 20:17 IST

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹12,717 ಕೋಟಿ ವಂಚನೆ ಮಾಡಿದ ಆರೋಪ ಹೊತ್ತಿರುವ ಆಭರಣ ಉದ್ಯಮಿ ನೀರವ್‌ ಮೋದಿ ಅವರು ಸಿಬಿಐ ತನಿಖೆಗಾಗಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ಮೂಲಗಳು ಹೇಳಿವೆ.

‘ನನಗೆ ವಿದೇಶದಲ್ಲಿ ಬೇರೆ ಬೇರೆ ವ್ಯವಹಾರಗಳಿವೆ. ಹಾಗಾಗಿ ಭಾರತಕ್ಕೆ ಬರಲು ಸಾಧ್ಯವಿಲ್ಲ’ ಎಂದು ನೀರವ್‌ ಅವರು ಸಿಬಿಐಗೆ ಇ–ಮೇಲ್‌ ಮೂಲಕ ತಿಳಿಸಿದ್ದಾರೆ. ಪಿಎನ್‌ಬಿ ವಂಚನೆಯ ತನಿಖೆಗೆ ಸಹಕರಿಸುವುದಕ್ಕೆ ಭಾರತಕ್ಕೆ ಬರುಲು ಇ–ಮೇಲ್‌ ಕಳುಹಿಸಲಾಗಿತ್ತು.

ಆರೋಪಿಗಳು ತನಿಖೆಗೆ ಸಹಕರಿಸುವುದು ಕಡ್ಡಾಯ. ತನಿಖೆಗೆ ಕರೆದಾಗಲೆಲ್ಲ ಬರಬೇಕು ಎಂದು ಫೆಬ್ರುವರಿಯಲ್ಲಿ ನೀರವ್‌ಗೆ ಕಳುಹಿಸಲಾದ ಸಂದೇಶದಲ್ಲಿ ಸಿಬಿಐ ಹೇಳಿತ್ತು. ನೀರವ್‌ ಅವರು ಜನವರಿ 1ರಂದು ಭಾರತ ತೊರೆದು ಹೋಗಿದ್ದಾರೆ.

ADVERTISEMENT

ಈಗ ನೀರವ್‌ ಅವರ ಪಾಸ್‌ಪೋರ್ಟ್‌ ಅನ್ನು ರದ್ದುಪಡಿಸಲಾಗಿದೆ. ಎಲ್ಲಿಯೇ ಇದ್ದರೂ ಅಲ್ಲಿರುವ ಭಾರತದ ರಾಯಭಾರ ಕಚೇರಿಗೆ ಭೇಟಿ ನೀಡಿದರೆ ಅಲ್ಲಿನ ಅಧಿಕಾರಿಗಳು ಪ್ರಯಾಣಕ್ಕೆ ಅಗತ್ಯ ದಾಖಲೆಗಳನ್ನು ನೀಡುತ್ತಾರೆ ಎಂದು ಸಿಬಿಐ ಹೇಳಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ನೀರವ್‌, ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಪಿಎನ್‌ಬಿಯ ಮುಖ್ಯ ಆಂತರಿಕ ಲೆಕ್ಕ ಪರಿಶೋಧಕ ಎಂ.ಕೆ. ಶರ್ಮಾ ಅವರನ್ನು ಸಿಬಿಐ ಬಂಧಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರ ಸಂಖ್ಯೆ 13ಕ್ಕೆ ಏರಿದೆ. ಇವರು ಬಂಧನಕ್ಕೆ ಒಳಗಾದ ಬ್ಯಾಂಕ್‌ನ 7ನೇ ಉದ್ಯೋಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.