ADVERTISEMENT

ತನಿಖೆ ನಡೆಸದೆ ತೀರ್ಮಾನ- ಇರಾನಿ ಟೀಕೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ಅಹಮದಾಬಾದ್(ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾರ್ದಾ ವಿರುದ್ಧ ಭೂ ವ್ಯವಹಾರಗಳ ತನಿಖೆ ನಡೆಸದೆ ಅವರು ತಪ್ಪಿತಸ್ಥರಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಹೇಳುತ್ತಿರುವ ಬಗ್ಗೆ ಬಿಜೆಪಿಯ ರಾಜ್ಯಸಭಾ ಸದಸ್ಯೆ ಸ್ಮೃತಿ ಇರಾನಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಾವುದೆ ರೀತಿಯ ವಿಚಾರಣೆ ನಡೆಸದೆ ವಾದ್ರಾ ಅವರು ಏನೂ ತಪ್ಪು ಮಾಡಿಲ್ಲ ಎಂಬ ತೀರ್ಮಾನಕ್ಕೆ ಕೇಂದ್ರದ ಸಚಿವರು, ಮುಖಂಡರು ಹೇಗೆ ಬಂದಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾ ಸಮ್ಮೇನದಲ್ಲಿ ಭಾಗವಹಿಸಿರುವ ಅವರು ಪತ್ರಕರ್ತರ ಜತೆ ಮಾತನಾಡುತ್ತಾ, ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ಪತ್ನಿ ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಯು ಅಂಗವಿಕಲರಿಗೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದನ್ನು ನೋಡಿದರೆ ಕೇಂದ್ರ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯ ಹೆಚ್ಚಿರುವುದು ಕಾನೂನು ಸುವ್ಯಸ್ಥೆ ಕುಸಿದಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಮುಖ್ಯಸ್ಥೆಯೂ ಆಗಿರುವ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹರಿಯಾಣದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ಭೂಪಿಂದರ್ ಸಿಂಗ್ ಹೂಡಾ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಬೇಕಾಗಿತ್ತು ಎಂದು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.