ADVERTISEMENT

‘ತಮಿಳಿನ ಆತ್ಮಾಭಿಮಾನ ಕೆದಕಬೇಡಿ’

‘ಮರ್ಸಲ್‌’: ಮೋದಿಗೆ ರಾಹುಲ್‌ ಗಾಂಧಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST
‘ತಮಿಳಿನ ಆತ್ಮಾಭಿಮಾನ ಕೆದಕಬೇಡಿ’
‘ತಮಿಳಿನ ಆತ್ಮಾಭಿಮಾನ ಕೆದಕಬೇಡಿ’   

ನವದೆಹಲಿ: ಕೇಂದ್ರ ಸರ್ಕಾರದ ಜಿಎಸ್‌ಟಿ ಮತ್ತು ನೋಟು ರದ್ದತಿ ನಿರ್ಧಾರಗಳನ್ನು ಟೀಕಿಸಿರುವ ಸಂಭಾಷಣೆಗಳನ್ನು ಹೊಂದಿರುವ, ನಟ ವಿಜಯ್‌ ನಟಿಸಿರುವ ತಮಿಳಿನ ‘ಮರ್ಸಲ್‌’ ಸಿನಿಮಾವನ್ನು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಬೆಂಬಲಿಸಿದ್ದಾರೆ.

ಚಿತ್ರದಲ್ಲಿನ ಸಂಭಾಷಣೆಗಳ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ನಂತರ ಅವರು ಚಿತ್ರದ ಪರವಾಗಿ ಮಾತನಾಡಿದ್ದಾರೆ.

‘ಮೋದಿ ಅವರೇ, ತಮಿಳುನಾಡಿನಲ್ಲಿ ಸಿನಿಮಾಗಳು ತಮಿಳು ಸಂಸ್ಕೃತಿ ಮತ್ತು ಭಾಷೆಯನ್ನು ಆಳವಾಗಿ ಅಭಿವ್ಯಕ್ತಿಗೊಳಿಸುತ್ತವೆ. ಮರ್ಸಲ್‌ ಚಿತ್ರದ ವಿಷಯದಲ್ಲಿ ಮೂಗು ತೂರಿಸುವ ಮೂಲಕ ತಮಿಳು ಆತ್ಮಾಭಿಮಾನವನ್ನು ಕೆದಕಲು ಯತ್ನಿಸಬೇಡಿ’ ಎಂದು ರಾಹುಲ್‌ ಟ್ವೀಟ್‌ ಮೂಲಕ ಎಚ್ಚರಿಸಿದ್ದಾರೆ.

ADVERTISEMENT

ಮರ್ಸಲ್‌ ಚಿತ್ರ ಮತ್ತು ನಟ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಟೀಕಿಸುತ್ತಿರುವುದಕ್ಕೆ ರಾಹುಲ್‌ ಗಾಂಧಿ ಅವರಿಗಿಂತಲೂ ಮೊದಲು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿದ್ದರು.

ಬಿಜೆಪಿ ಮುಖಂಡ ಎಚ್‌. ರಾಜಾ ಅವರು ಚಿತ್ರದಲ್ಲಿನ ಸಂಭಾಷಣೆಗಳಿಗೂ ವಿಜಯ್‌ ಅವರ ಧಾರ್ಮಿಕ ಹಿನ್ನೆಲೆಗೂ ತಳಕು ಹಾಕಿ ಹೇಳಿಕೆ ನೀಡಿದ ಬೆನ್ನಲ್ಲೇ ಚಿದಂಬರಂ ಈ ಟ್ವೀಟ್‌ ಮಾಡಿದ್ದರು. ನಟನ ಧರ್ಮವನ್ನು ಉಲ್ಲೇಖಿಸುವುದುಕ್ಕಾಗಿ ರಾಜಾ ಅವರು ವಿಜಯ್‌ ಅವರನ್ನು ‘ಜೋಸೆಫ್‌ ವಿಜಯ್‌’ ಎಂದು ಕರೆದಿದ್ದರು.

‘ಮರ್ಸಲ್‌ನಲ್ಲಿರುವ ಸಂಭಾಷಣೆಗಳನ್ನು ತೆಗೆದುಹಾಕಬೇಕು ಎಂದು ಬಿಜೆಪಿ ಹೇಳುತ್ತಿದೆ. ಒಂದು ವೇಳೆ ‘ಪರಾಶಕ್ತಿ’ ಚಿತ್ರ ಇಂದು ಬಿಡುಗಡೆಯಾದರೆ ಆಗುವ ಪರಿಣಾಮಗಳನ್ನು ಊಹಿಸಿ. ಚಿತ್ರ ತಯಾರಕರ ಗಮನಕ್ಕೆ: ಸರ್ಕಾರದ ನೀತಿಗಳನ್ನು ಹೊಗಳುವ ಸಾಕ್ಷ್ಯಚಿತ್ರಗಳನ್ನು ಮಾತ್ರ ನೀವು ಮಾಡಬಹುದು ಎಂಬ ಕಾನೂನು ಬರುತ್ತಿದೆ’ ಎಂದು ಚಿದಂಬರಂ ವ್ಯಂಗ್ಯವಾಡಿದ್ದರು.

ಕಮಲ್‌ ಹಾಸನ್‌ ಬೆಂಬಲ
‌ಮರ್ಸಲ್‌ ಚಿತ್ರಕ್ಕೆ ಖ್ಯಾತ ನಟ ಕಮಲ್‌ ಹಾಸನ್‌ ಅವರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಮರ್ಸಲ್‌ ಪ್ರಮಾಣೀಕೃತ ಸಿನಿಮಾ. ಅದನ್ನು ಮರು ಸೆನ್ಸಾರ್‌ ಮಾಡಬೇಡಿ. ತರ್ಕಬದ್ಧ ಪ್ರತಿಕ್ರಿಯೆ ನೀಡುವುದರ ಮೂಲಕ ಟೀಕೆಗಳಿಗೆ ಎದುರೇಟು ನೀಡಿ. ಟೀಕಾಕಾರರ ಬಾಯಿ ಮುಚ್ಚಿಸಬೇಡಿ. ಭಾರತವು ಯಾವಾಗ ಮಾತನಾಡುತ್ತದೆಯೋ, ಅಂದು ಅದು ಪ್ರಕಾಶಿಸಲಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.