ADVERTISEMENT

ತಾಜ್‌ ಸಂರಕ್ಷಣೆ ಸರ್ಕಾರದ ಹೊಣೆ: ಯೋಗಿ

ಶಾಸಕ ಸಂಗೀತ್ ಸೋಮ್‌ಗೆ ವಿವರಣೆ ಕೇಳಿದ ಉತ್ತರ ಪ್ರದೇಶದ ಮುಖ್ಯಮಂತ್ರಿ

ಪಿಟಿಐ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ತಾಜ್‌ ಸಂರಕ್ಷಣೆ ಸರ್ಕಾರದ ಹೊಣೆ: ಯೋಗಿ
ತಾಜ್‌ ಸಂರಕ್ಷಣೆ ಸರ್ಕಾರದ ಹೊಣೆ: ಯೋಗಿ   

ಗೋರಖಪುರ/ಲಖನೌ: ತಾಜ್‌ಮಹಲ್ ಅನ್ನು ಯಾರು ನಿರ್ಮಿಸಿದರು ಎಂಬುದು ಮುಖ್ಯವಲ್ಲ. ಐತಿಹಾಸಿಕ ಸ್ಮಾರಕದ ರಕ್ಷಣೆ ಉತ್ತರ ಪ್ರದೇಶ ಸರ್ಕಾರದ ಹೊಣೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ಹೇಳಿದ್ದಾರೆ.

ತಮ್ಮ ಸಹೋದ್ಯೋಗಿ, ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು ತಾಜ್‌ಮಹಲ್‌ ಬಗ್ಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗೆ ಯೋಗಿ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ತಾಜ್‌ ನಿರ್ಮಿಸಿದ್ದು ಯಾರೆಂಬುದು ಅಪ್ರಸ್ತುತ. ಭಾರತ ಮಾತೆಯ ಮಕ್ಕಳಿಂದ ಇದು ನಿರ್ಮಾಣವಾಗಿದೆ’ ಎಂದು ಯೋಗಿ ಹೇಳಿಕೆ ನೀಡಿದ್ದಾರೆ. ಶಾಸಕ ಸೋಮ್ ಅವರಿಂದ ಮುಖ್ಯಮಂತ್ರಿ ವಿವರಣೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಆಗ್ರಾ ಭೇಟಿ: ಅಕ್ಟೋಬರ್ 26ರಂದು ಆಗ್ರಾಗೆ ತೆರಳಿ ಪ್ರವಾಸೋದ್ಯಮ ಯೋಜನೆಗಳನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ’ಅಂದು ಆಗ್ರಾ ನಗರದಲ್ಲಿ ₹370 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಪರಾಮರ್ಶೆ ನಡೆಸಲಿದ್ದೇನೆ. ವಾಸ್ತುಶಿಲ್ಪದಿಂದ ಜಗತ್ಪ್ರಸಿದ್ಧಿಯಾಗಿರುವ ತಾಜ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಹಾಗೂ ಸೌಲಭ್ಯ ಕಲ್ಪಿಸುವುದು ನಮ್ಮ ಜವಾಬ್ದಾರಿ’ ಎಂದಿದ್ದಾರೆ.

ತಾಜ್‌ ಜೊತೆ ಕಲಿಂಜರ್ ಕೋಟೆ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅವರ ಕೋಟೆ, ಮೀರಜ್‌ಪುರದ ಚುನಾರ್ ಕೋಟೆ ಅಭಿವೃದ್ಧಿಗೂ ಯೋಜನೆ ಸಿದ್ಧವಾಗುತ್ತಿದೆ ಎಂದು ಯೋಗಿ ಹೇಳಿದ್ದಾರೆ.

***
ಮೋದಿ ತರಾಟೆ
ತಾಜ್‌ಮಹಲ್ ಇತಿಹಾಸದ ಕಪ್ಪುಚುಕ್ಕೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

‘ತಮ್ಮ ಇತಿಹಾಸ, ಪರಂಪರೆ ಬಗ್ಗೆ ಹೆಮ್ಮೆ ಇಲ್ಲದಿದ್ದರೆ ದೇಶ ಅಭಿವೃದ್ಧಿಯಾಗುವುದಾದರೂ ಹೇಗೆ?. ಅವರು ಅದನ್ನು ಮುಂದುವರಿಸಿದರೆ ತಮ್ಮ ಮೌಲ್ಯವನ್ನು ಕಳೆದುಕೊಳ್ಳುವುದು ಖಚಿತ ’ ಎಂದು ಮೋದಿ ತೀಕ್ಷ್ಣವಾಗಿ ಹೇಳಿದ್ದಾರೆ. 

***
ರಾಷ್ಟ್ರಪತಿ ಭವನ, ಸಂಸತ್‌ ಭವನವನ್ನೂ ಕೆಡವಿ: ಅಜಂ
(ರಾಂಪುರ ವರದಿ): 
ತಾಜ್‌ಮಹಲ್‌ನಂತೆಯೇ ದಾಸ್ಯದ ಸಂಕೇತಗಳಾದ ರಾಷ್ಟ್ರಪತಿ ಭವನ, ಸಂಸತ್ ಭವನ, ಕುತುಬ್ ಮಿನಾರ್ ಹಾಗೂ ಕೆಂಪುಕೋಟೆಗಳನ್ನು ಕೆಡವಬೇಕು ಎಂದು ಸಮಾಜವಾದಿ ಪಕ್ಷದ ಪ್ರದಾನ ಕಾರ್ಯದರ್ಶಿ ಅಜಂ ಖಾನ್ ಆಗ್ರಹಿಸಿದ್ದಾರೆ.

‘ಗುಲಾಮಗಿರಿಯ ಸಂಕೇತಗಳಾದ ಎಲ್ಲ ಕಟ್ಟಡಗಳನ್ನು ಧ್ವಂಸಗೊಳಿಸಬೇಕು. ತಾಜ್‌ಮಹಲ್ ಮಾತ್ರವೇ ಏಕೆ?’ ಎಂದು ಅಜಂ ಪ್ರಶ್ನಿಸಿದ್ದಾರೆ.


***

ಭಾರತೀಯ ಕಾರ್ಮಿಕರ ರಕ್ತ ಮತ್ತು ಬೆವರಿನಿಂದ ತಾಜ್‌ಮಹಲ್ ನಿರ್ಮಾಣವಾಗಿದೆ
ಯೋಗಿ ಆದಿತ್ಯನಾಥ, ಉತ್ತರ ‌ಪ್ರದೇಶ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.