ADVERTISEMENT

ತಾಪಮಾನ ನಿಯಂತ್ರಣ: ಜಾಗತಿಕ ಮಟ್ಟದಲ್ಲಿ ಇಚ್ಛಾಶಕ್ತಿ ಕೊರತೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ):  ಜಾಗತಿಕ ತಾಪಮಾನ ಏರಿಕೆ ಸಮಸ್ಯೆಯನ್ನು ನಿಭಾಯಿಸುವ ಕುರಿತಂತೆ ಜಾಗತಿಕ ಸಮುದಾಯದಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ 12ನೇ ದೆಹಲಿ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಮಾತನಾಡಿದ ಸಿಂಗ್ ಅವರು, `ಜಾಗತಿಕ  ತಾಪಮಾನ ಏರಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸುವ ಯತ್ನ ಮಾಡಬೇಕು. ಆದರೆ ಪ್ರಸ್ತುತ ಈ ವಿಚಾರ ಕುರಿತಂತೆ ಜಾಗತಿಕ ಸಮುದಾಯದಲ್ಲಿ ಇಚ್ಛಾಶಕ್ತಿಯ ಕೊರತೆ ಇದ್ದಂತೆ ಕಾಣುತ್ತದೆ~ ಎಂದು ಅಭಿಪ್ರಾಯಪಟ್ಟರು.

ಇಂಗಾಲದ ಹೊರಸೂಸುವಿಕೆ ವಿಚಾರದ ಕುರಿತಾಗಿ ವಿಶ್ವದ ರಾಷ್ಟ್ರಗಳಲ್ಲಿ ನಿಷ್ಪಕ್ಷಪಾತತೆಯ ಅಗತ್ಯ ಇದೆ ಎಂದು ಹೇಳಿದ ಪ್ರಧಾನಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇಂಗಾಲ ಸೂಸುವಿಕೆ ತಲಾ ಪ್ರಮಾಣ ಅಭಿವೃದ್ಧಿ ಶೀಲರಾಷ್ಟ್ರಗಳಿಗಿಂತ 10ರಿಂದ 12ರಷ್ಟು ಪಟ್ಟು ಹೆಚ್ಚಿದೆ ಎಂದರು.

ADVERTISEMENT

ತಾಪಮಾನ ಏರಿಕೆ ವಿಚಾರವನ್ನು ನಿಭಾಯಿಸಲು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳು ವಿಶಾಲವಾದ ತಳಹದಿಯಲ್ಲಿ ಪರಸ್ಪರ ಸಹಕಾರ ನೀಡುವ ಅಗತ್ಯ ಇದೆ ಎಂದು ಅವರು ಒತ್ತಿ ಹೇಳಿದರು.
ತಾಪಮಾನ ಏರಿಕೆಯ ಸಮಸ್ಯೆಯನ್ನು ಪರಿಹರಿಸುವ ಸಂಬಂಧ ರೂಪಿಸುವ ಮಾರ್ಗಗಳು ಅಭಿವೃದ್ಧಿ ಶೀಲ ರಾಷ್ಟ್ರಗಳ ಅಭಿವೃದ್ಧಿಗೆ ಧಕ್ಕೆಯನ್ನುಂಟು ಮಾಡುವಂತೆ ಇರಬಾರದು ಎಂದೂ ಮನಮೋಹನ್‌ಸಿಂಗ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.