ADVERTISEMENT

ತಾರುಣಿ ಸಾವು: ಅಮಿತಾಭ್ ಕಂಬನಿ

​ಪ್ರಜಾವಾಣಿ ವಾರ್ತೆ
Published 15 ಮೇ 2012, 19:30 IST
Last Updated 15 ಮೇ 2012, 19:30 IST
ತಾರುಣಿ ಸಾವು: ಅಮಿತಾಭ್ ಕಂಬನಿ
ತಾರುಣಿ ಸಾವು: ಅಮಿತಾಭ್ ಕಂಬನಿ   

ಮುಂಬೈ (ಪಿಟಿಐ): ನೇಪಾಳದಲ್ಲಿ ಸೋಮವಾರ ಅಪಘಾತಕ್ಕೀಡಾಗಿದ್ದ ವಿಮಾನದಲ್ಲಿದ್ದ ಬಾಲ ನಟಿ, `ಪಾ~ ಚಿತ್ರದಲ್ಲಿ ಸಹ ಕಲಾವಿದೆಯಾಗಿದ್ದ ತಾರುಣಿ ಸಚ್‌ದೇವ್ (14) ಸಾವಿಗೆ ಖ್ಯಾತ ನಟ ಅಮಿತಾಭ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಕಂಬನಿ ಮಿಡಿದಿದ್ದಾರೆ.

ನೇಪಾಳದ ಜೊಮ್ಸಮ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಯತ್ನಿಸಿದ ಸಂದರ್ಭದಲ್ಲಿ ವಿಮಾನವು ಪರ್ವತಕ್ಕೆ ಅಪ್ಪಳಿಸಿತ್ತು. ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ 13 ನತದೃಷ್ಟ ಭಾರತೀಯರಲ್ಲಿ ತಾರುಣಿಯೂ ಸೇರಿದ್ದಾಳೆ.

`ಪಾ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ತಾರುಣಿ ಸಚ್‌ದೇವ್ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂಬ ಸುದ್ದಿ ಓದಿದಾಗ, ದೇವರೇ.. ಈ ಸುದ್ದಿ ಸುಳ್ಳಾಗಿರಲಿ ಎಂದು ಪ್ರಾರ್ಥಿಸಿದೆ~ ಎಂದು ಅಮಿತಾಭ್ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.

ADVERTISEMENT

ತಂಪು ಪಾನೀಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ 14 ವರ್ಷದ ತಾರುಣಿ `ರಸ್ನಾ ಗರ್ಲ್~ ಎಂದೇ ಹೆಸರಾಗಿದ್ದಳು. ಕರೀಷ್ಮಾ ಕಪೂರ್ ಸೇರಿದಂತೆ ವಿವಿಧ ಬಾಲಿವುಡ್ ನಟ ನಟಿಯರೊಂದಿಗೆ 50ಕ್ಕೂ ಹೆಚ್ಚು ಜಾಹೀರಾತಿನಲ್ಲಿ ತಾರುಣಿ ಕಾಣಿಸಿಕೊಂಡಿದ್ದಳು.

`ದುರಂತದಲ್ಲಿ `ಪಾ~ ಚಿತ್ರದಲ್ಲಿ  ಸಹ ಕಲಾವಿದೆಯಾಗಿದ್ದ ತಾರುಣಿ ಮೃತಪಟ್ಟಿದ್ದಾಳೆ ಎಂದು ತಿಳಿದಾಗ  ದುಃಖವಾಯಿತು. ನನಗೆ ಯಾವುದೇ ಮಾತು ಹೊರಡುತ್ತಿಲ್ಲ~ ಎಂದು ಅಭಿಷೇಕ್ ಬಚ್ಚನ್ ತಮ್ಮ ಟ್ವಿಟ್ಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ರೈತರಿಗೆ  ನೆರವು (ವಾರ್ಧಾ ವರದಿ): ವಿದರ್ಭ ಪ್ರದೇಶದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟದಲ್ಲಿರುವ 114 ರೈತರಿಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ನೆರವಿನ ಹಸ್ತ ಚಾಚಿದ್ದಾರೆ.

ಅಮಿತಾಭ್ ಅವರು ನೀಡಿರುವ 30 ಲಕ್ಷ ರೂಪಾಯಿ ಚೆಕ್‌ನ್ನು ಸ್ಥಳೀಯ ಕ್ಲಬ್‌ವೊಂದು ಸಂಸದ ದತ್ತಾ ಮೇಘಾ ಮೂಲಕ ರೈತರಿಗೆ ವಿತರಿಸಿದೆ.

ವಾರ್ಧಾ ಜಿಲ್ಲೆಯ 20 ಹಳ್ಳಿಗಳಲ್ಲಿ ತೀರಾ ಸಂಕಷ್ಟದಲ್ಲಿರುವ  114 ರೈತರನ್ನು  ಆಯ್ಕೆ ಮಾಡಿ ಅವರಿಗೆ ಅಮಿತಾಭ್ ಅವರು ನೀಡಿರುವ ನೆರವನ್ನು ತಲುಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.