ADVERTISEMENT

ತೆರಿಗೆ ವಂಚನೆ ತಡೆಗೆ ಬಹುಪಕ್ಷೀಯ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ನವದೆಹಲಿ (ಪಿಟಿಐ): ಕಪ್ಪುಹಣ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿರುವ ಭಾರತ, ತೆರಿಗೆ ವಂಚನೆ ತಡೆಯಲು ಪರಸ್ಪರ ಸಹಕಾರ ನೀಡುವ ಬಹುಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ.

ಜಾಗತಿಕ ಮಟ್ಟದ ಪ್ರಮುಖ ಆರ್ಥಿಕ ಸಂಸ್ಥೆಯಾದ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ (ಒಇಸಿಡಿ) ಆಶ್ರಯದಲ್ಲಿ ಈಚೆಗೆ ಫ್ರಾನ್ಸ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಒಟ್ಟು 33 ರಾಷ್ಟ್ರಗಳ ಜತೆ ಅದು ಸಹಿ ಹಾಕಿದೆ. ಹಣಕಾಸು ಸಚಿವಾಲಯದ ವಿದೇಶಿ ತೆರಿಗೆಗಳ ವಿಭಾಗದ ಅಧಿಕಾರಿಗಳು ಒಇಸಿಡಿ ಉಪ ಪ್ರಧಾನ ಕಾರ್ಯದರ್ಶಿ ರಿನ್‌ತಾರೊ ತಮಕಿಯೊ ಅವರೊಂದಿಗೆ ಕರಾರು ಮಾಡಿಕೊಂಡರು.

ತೆರಿಗೆ ವಂಚನೆ ವಿರುದ್ಧದ ಹೋರಾಟದಲ್ಲಿ ಈ ರಾಷ್ಟ್ರಗಳು ಪರಸ್ಪರ ಸಹಕಾರ ನೀಡಲಿವೆ. ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನೂ ವಿನಿಮಯ ಮಾಡಿಕೊಳ್ಳಲಿವೆ. ಇದರಿಂದಾಗಿ ತೆರಿಗೆ ಕಳ್ಳತನವನ್ನು ನಿಗ್ರಹಿಸಬಹುದಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ, ಫ್ರಾನ್ಸ್, ಜರ್ಮನಿ, ಜಪಾನ್, ಕೊರಿಯಾ, ಡೆನ್ಮಾರ್ಕ್, ಆಸ್ಟ್ರೇಲಿಯಾ, ಇಟಲಿ, ರಷ್ಯ, ಇಂಗ್ಲೆಂಡ್, ದಕ್ಷಿಣಾ ಆಫ್ರಿಕಾ ಈ ಒಪ್ಪಂದಕ್ಕೆ ಸಹಿ ಹಾಕಿದ ಇತರ ಪ್ರಮುಖ ರಾಷ್ಟ್ರಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.