ADVERTISEMENT

ತೆಲಂಗಾಣಕ್ಕೆ ಆಗ್ರಹಿಸಿ ಅಸಹಕಾರ ಚಳವಳಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 10:15 IST
Last Updated 17 ಫೆಬ್ರುವರಿ 2011, 10:15 IST

ಹೈದರಾಬಾದ್ (ಐಎಎನ್ಎಸ್): ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಇದೀಗ ಅಸಹಕಾರ ಚಳವಳಿಯಾಗಿ ಮಾರ್ಪಾಡುಗೊಂಡಿದೆ. ಜಂಟಿ ಕ್ರಿಯಾ ಸಮಿತಿ, ತೆಲಂಗಾಣ ರಾಷ್ಟ್ರೀಯ ಸಮಿತಿ, ಭಾರತೀಯ ಜನತಾ ಪಕ್ಷಗಳು ನೀಡಿದ ಕರೆಗೆ ಓಗೊಟ್ಟು ಸುಮಾರು 3 ಲಕ್ಷ ಮಂದಿ ಸರ್ಕಾರಿ ನೌಕರರು ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಜಂಟಿ ಕ್ರಿಯಾ ಸಮಿತಿಯ ಭಾಗವಾಗಿಲ್ಲದ ಪ್ರಮುಖ ವಿರೋಧ ಪಕ್ಷ ತೆಲುಗುದೇಶಂ ಹಾಗೂ ಕಮ್ಯುನಿಷ್ಟ್ ಪಕ್ಷಗಳೂ ಸಹ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.

ಮುಷ್ಕರದನ್ವಯ ಸರ್ಕಾರಿ ನೌಕರರು ಕಚೇರಿಗಳಿಗೆ ಹಾಜರಾಗುತ್ತಾರೆ. ಆದರೆ ಯಾವುದೇ ಕೆಲಸ ನಿರ್ವಹಿಸುವುದಿಲ್ಲ. ತಮ್ಮ ಮೇಲಧಿಕಾರಿಗಳು ನೀಡಿದ ಆದೇಶದಂತೆ ನಡೆಯುವುದಿಲ್ಲ. ಸರ್ಕಾರದ ಆಡಳಿತಕ್ಕೆ ಯಾವುದೇ ವಿಧವಾದ ಸಹಕಾರ ನೀಡುವುದಿಲ್ಲ.

ADVERTISEMENT

ನೌಕರರು ಮುಷ್ಕರದಲ್ಲಿ ಭಾಗವಹಿಸಬಾರದು ಎಂಬ ರಾಜ್ಯ ಸರ್ಕಾರದ ಕೋರಿಕೆಯನ್ನು ಸಾರಸಗಟಾಗಿ ತಿರಸ್ಕರಿಸಿರುವ ತೆಲಂಗಾಣ ಹಾಗೂ ರಾಯಲಸೀಮಾ ಭಾಗದ ನೌಕರರು ಅಸಹಕಾರ ಚಳವಳಿಗೆ ಧುಮುಕಿದ್ದಾರೆ. ಈ ಮಧ್ಯೆ ಶಿಕ್ಷಕರು, ವಕೀಲರು, ಹಾಗೂ ವಿದ್ಯಾರ್ಥಿಗಳೂ ಸಹ ಚಳವಳಿಯಲ್ಲಿ ಭಾಗವಹಿಸುವುದಾಗಿ ಪ್ರಕಟಿಸಿದ್ದಾರೆ.

ರಾಜ್ಯ ಸರ್ಕಾರಿ ಬಸ್ ಗಳಲ್ಲಿ ಸಂಚರಿಸುವಾಗ ಯಾರೊಬ್ಬರೂ ಟಿಕೆಟ್ ಕೊಳ್ಳಬಾರದು ಹಾಗೂ ಯಾವುದೇ ತೆರಿಗೆಗಳನ್ನು ಸರ್ಕಾರಕ್ಕೆ ಪಾವತಿ ಮಾಡಬಾರದು ಎಂದು ಸಾರ್ವಜನಿಕರಲ್ಲಿ ಜಂಟಿ ಕ್ರಿಯಾ ಸಮಿತಿಯು ಮನವಿ ಮಾಡಿದೆ. ಈ ಚಳವಳಿಗೆ ಹೈದರಾಬಾದ್ ನಲ್ಲಿ ಟಿಆರ್ಎಸ್ ನಾಯಕ ತಾರಾಕರಂರಾವ್ ಅವರು ಚಾಲನೆ ನೀಡಿದರು.

ಹಲವು ಜಿಲ್ಲೆಗಳಲ್ಲಿ ಟಿಕೆಟ್ ಕೊಳ್ಳದೆ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದ ಟಿಆರ್ಎಸ್ ಪಕ್ಷದ ಹಲವು ಕಾರ್ಯಕರ್ತರು ಹಾಗೂ ತೆಲಂಗಾಣದ ರಾಜ್ಯದ ಹಲವು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ತ ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನದಲ್ಲೂ ತೆಲಂಗಾಣ ವಿಷಯ ಪ್ರತಿಧ್ವನಿಸಿ ಇಡೀ ಕಲಾಪವೇ ಅಸ್ತವ್ಯಸ್ತಗೊಂಡಿತು. ಟಿಆರ್ಎಸ್ ಪಕ್ಷದ ಸದಸ್ಯರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ರಾಜ್ಯಪಾಲರ ಕೈಯಿಂದ ಕಾಗದಗಳನ್ನು ಕಸಿದುಕೊಂಡು ಹರಿದು ಹಾಕಿ ~ರಾಜ್ಯಪಾಲರೇ ಹಿಂದಿರುಗಿ~ ಎಂಬ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.