ADVERTISEMENT

ತೆಲಂಗಾಣ: ಕಾಲೇಜಿನ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಹೈದರಾಬಾದ್ (ಪಿಟಿಐ/ಐಎಎನ್‌ಎಸ್): ಕಾಲೇಜು ಬಂದ್ ಮಾಡುವಂತೆ ಒತ್ತಾಯಿಸಿ ತೆಲಂಗಾಣ ಪರ ಹೋರಾಟಗಾರರು ಇಲ್ಲಿನ ಕುಕ್ಕಟಪಲ್ಲಿ ಪ್ರದೇಶದಲ್ಲಿರುವ ಎನ್‌ಆರ್‌ಐ ಕಾಲೇಜಿನ ಮೇಲೆ ಸೋಮವಾರ ದಾಳಿ ನಡೆಸಿದರು. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಕಾಲೇಜಿನ ಕಿಟಿಕಿಗಳಿಗೆ ಹಾನಿಯಾಯಿತು.

ಇದಕ್ಕೂ ಮುನ್ನ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು ಕಾಲೇಜು ತೆರೆಯುವಂತೆ ಆಗ್ರಹಿಸಿ, ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೋಷಕರ ನಡುವೆ ವಾಗ್ವಾದ ನಡೆದು ಪ್ರತಿಭಟನಾಕಾರರು ಕಾಲೇಜಿನ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರು ಈ ಸಂದರ್ಭದಲ್ಲಿ ಲಾಠಿ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಿದರು.

ಕಾಲೇಜಿನ ಪೋಷಕ ಮಂಡಳಿ ಭಾನುವಾರ ಸಭೆ ನಡೆಸಿ, ಶಾಲಾ, ಕಾಲೇಜುಗಳನ್ನು ಪ್ರತಿಭಟನೆಯಿಂದ ಕೈ ಬಿಡುವಂತೆ ತೆಲಂಗಾಣ ಜಂಟಿ ಹೋರಾಟ ಸಮಿತಿಯನ್ನು ಒತ್ತಾಯಿಸಿತ್ತು.

ADVERTISEMENT

ದಸರಾ ರಜೆ ಮುಗಿದ ಕಾರಣ ಸೋಮವಾರ ಕುಕ್ಕಟಪಲ್ಲಿ ಪ್ರದೇಶದಲ್ಲಿ ಕೆಲವು ಕಾಲೇಜುಗಳು ಪೊಲೀಸ್ ಬಿಗಿ ಭದ್ರತೆ ನಡುವೆ ತರಗತಿಗಳನ್ನು ಆರಂಭಿಸಿದ್ದವು. ಹೈದರಾಬಾದ್ ಮತ್ತು ಸಿಕಂದರಾಬಾದ್‌ನ ಬಹುತೇಕ ಖಾಸಗಿ ಶಾಲಾ, ಕಾಲೇಜುಗಳನ್ನು ಮುಚ್ಚಲಾಗಿದೆ. ಅಲ್ಲದೆ ಹೈದರಾಬಾದ್ ಮತ್ತು ತೆಲಂಗಾಣ ಪ್ರಾಂತ್ಯದ 9 ಜಿಲ್ಲೆಗಳ ಸರ್ಕಾರಿ ಶಾಲೆಗಳ ಶಿಕ್ಷಕರು ತೆಲಂಗಾಣ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದರಿಂದ ಈ ಶಾಲೆಗಳೂ ತೆರೆದಿಲ್ಲ.  

ಅಭಿಪ್ರಾಯ ಕೇಳಿದ ಕೇಂದ್ರ:
ತೆಲಂಗಾಣ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ನಟ ಹಾಗೂ ಕಾಂಗ್ರೆಸ್ ಮುಖಂಡ ಚಿರಂಜೀವಿ, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರ ಸಲಹೆ ಕೇಳಿದ್ದು, ಅವರು ಸೋಮವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೇಂದ್ರ ಸಚಿವರಾದ ಪ್ರಣವ್ ಮುಖರ್ಜಿ, ಎ.ಕೆ.ಆಂಟನಿ, ಪಿ.ಚಿದಂಬರಂ ಮತ್ತು ಗುಲಾಂ ನಬಿ ಅಜಾದ್ ಅವರನ್ನು ಭೇಟಿ ಮಾಡಿ ತೆಲಂಗಾಣ ವಿಷಯದಲ್ಲಿ ಕೈಗೊಳ್ಳುವ ನಿರ್ಧಾರ ರಾಜ್ಯ ಕಾಂಗ್ರೆಸ್ ಮೇಲೆ ಬೀರಬಹುದಾದ ವಾಸ್ತವ ಪರಿಣಾಮಗಳನ್ನು ವಿವರಿಸಿದ್ದಾರೆ.

`ಇದೊಂದು ಗಹನವಾದ ವಿಷಯವಾಗಿದ್ದು, ಚರ್ಚೆ ಮುಂದುವರಿದಿದೆ. ಇತರ ಪಕ್ಷಗಳಿಂದಲೂ ಅಭಿಪ್ರಾಯ ಪಡೆಯಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ವಿಷಯದಲ್ಲಿ ಪರಸ್ಪರ ಚರ್ಚೆ ನಡೆಸಲಿವೆ~ ಎಂದು ಕೇಂದ್ರ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ. 

ರೈಲು ತಡೆ: ಇದೇ ಬುಧವಾರದಿಂದ ತೆಲಂಗಾಣ ಪರ ಹೋರಾಟಗಾರರು ಹಮ್ಮಿಕೊಂಡಿರುವ ರೈಲು ತಡೆ ಚಳವಳಿಯನ್ನು ತಡೆಯಲು ಪೊಲೀಸರು, ಕೇಂದ್ರ ಶಸ್ತ್ರಸಜ್ಜಿತ ಪಡೆ ಮತ್ತು ರೈಲ್ವೆ ಭದ್ರತಾ ಪಡೆಗಳು ಸಿದ್ಧತೆ ನಡೆಸಿವೆ.

`ರೈಲ್ವೆ ತಡೆಯು ಕಾನೂನು ಭಂಗಗೊಳಿಸುವ ಕೃತ್ಯವಾಗಿದೆ. ರೈಲ್ವೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅನುಸಾರ, ಇಂತಹ ಕೃತ್ಯ ಎಸಗಿದವರನ್ನು ಬಂಧಿಸಲಾಗುವುದು~ ಎಂದು ರಾಜ್ಯ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ ಅನ್ವರ್ ಉಲ್ ಹೂಡ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.