ADVERTISEMENT

ತೆಲಂಗಾಣ ಮುಖಂಡರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ಹೈದರಾಬಾದ್ (ಐಎಎನ್‌ಎಸ್): ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆಗೆ ಆಗ್ರಹಿಸಿ ಸುಮಾರು ಒಂದು ತಿಂಗಳಿನಿಂದ ಮುಷ್ಕರ ನಡೆಸುತ್ತಿರುವ ಸಿಂಗನೇರಿ ಗಣಿ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಲು ಮುಂದಾದ ತೆಲಂಗಾಣ ಮುಖಂಡರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಕಮ್ಮಂ ಜಿಲ್ಲೆಯ ಸಿಂಗನೇರಿ ಗಣಿ ಪ್ರದೇಶಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ತೆಲಂಗಾಣ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಸಂಯೋಜಕ ಎಂ.ಕೋದಂಡರಾಮ ಸೇರಿದಂತೆ 16 ಮುಖಂಡರನ್ನು ವಾರಂಗಲ್ ಜಿಲ್ಲೆಯ ಪೆಂಬುರ್ತಿ ಬಳಿ ಬಂಧಿಸಲಾಗಿದೆ.

ಪೊಲೀಸರ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾದುದು ಎಂದು ಖಂಡಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖ್ಯಸ್ಥ ಕೆ.ಚಂದ್ರಶೇಖರ ರಾವ್, ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಜೆಎಸಿ ಕಾರ್ಯಕರ್ತರು ನಲಗೊಂಡ ಜಿಲ್ಲೆಯ ಅಲೆರ್ ಹಾಗೂ ಭೋಂಗಿರ್‌ನಲ್ಲಿ ರಸ್ತೆತಡೆ ನಡೆಸಿದರು. ಸಿಂಗನೇರಿಯಲ್ಲಿ ಸರ್ಕಾರಿ ಒಡೆತನದ 50 ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಕಮ್ಮಂ, ವಾರಂಗಲ್, ಕರೀಂ ನಗರ್ ಹಾಗೂ ಆದಿಲಾಬಾದ್‌ನ ಕಾರ್ಮಿಕರು ಸೆ. 13ರಿಂದ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ಕಲ್ಲಿದ್ದಲು ಉತ್ಪಾದನೆಗೆ ಭಾರಿ ಹೊಡೆತ ಬಿದ್ದಿದೆ.

ಮುಷ್ಕರ ಮುಂದುವರಿಸಲು ನಿರ್ಧಾರ:  ತೆಲಂಗಾಣ ಬೇಡಿಕೆಗೆ ಆಗ್ರಹಿಸಿ ಕಳೆದ 21 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದುವರಿಸಲು ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು (ಆರ್‌ಟಿಸಿ) ನಿರ್ಧರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.