ADVERTISEMENT

ತೆಲಂಗಾಣ: ಮೂಡದ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ನವದೆಹಲಿ: ತೆಲಂಗಾಣ ಪ್ರತ್ಯೇಕ ರಾಜ್ಯದ ಬೇಡಿಕೆ ಕುರಿತು ಚರ್ಚಿಸಲು ಶುಕ್ರವಾರ ಸೇರಿದ್ದ ಸೋನಿಯಾ ನೇತೃತ್ವದ ಕಾಂಗ್ರೆಸ್ ಪ್ರಮುಖರ ಸಮಿತಿ (ಕೋರ್ ಕಮಿಟಿ) ಸಭೆಗೆ ಇನ್ನು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರ ರೇಸ್‌ಕೋರ್ಸ್ ರಸ್ತೆ ನಿವಾಸದಲ್ಲಿ ಸಂಜೆ 6.30ಕ್ಕೆ ಆರಂಭವಾದ ಸಭೆ ರಾತ್ರಿ 8ಕ್ಕೆ ಮುಗಿಯಿತು. ಸಭೆಯಿಂದ ಹೊರ ಬಂದ ಗೃಹ ಸಚಿವ ಪಿ. ಚಿದಂಬರಂ ತೆಲಂಗಾಣ ಬೇಡಿಕೆ ಹಾಗೂ ಚುನಾವಣಾ ವ್ಯವಸ್ಥೆ ಸುಧಾರಣೆ ಕುರಿತು ಚರ್ಚಿಸಲಾಯಿತು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ನಡೆದಿರುವ ಹೋರಾಟ ತೀವ್ರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಒತ್ತಡಕ್ಕೆ ಸಿಕ್ಕಿದ್ದು ಏನಾದರೂ ತೀರ್ಮಾನ ಮಾಡಲೇಬೇಕಾದ ಅನಿವಾರ್ಯತೆಗೆ ಸಿಕ್ಕಿಕೊಂಡಿದೆ.

ಈ ಕಾರಣಕ್ಕೆ ಶುಕ್ರವಾರದ ಸಭೆ ಮಹತ್ವದ್ದಾಗಿತ್ತು. ಪ್ರತ್ಯೇಕ ರಾಜ್ಯ ರಚನೆ ಕುರಿತ ಸಾಧಕ ಬಾಧಕ ಕುರಿತು ವಿರವಾಗಿ ಚರ್ಚೆ ನಡೆಯಿತು. ಆದರೆ, ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ಆಂಧ್ರದ ಉಸ್ತುವಾರಿ ಹೊತ್ತಿರುವ ಆರೋಗ್ಯ ಸಚಿವ ಗುಲಾಂನಬಿ ಆಜಾದ್ ಮತ್ತು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರನ್ನು ವಿಶೇಷ ಆಹ್ವಾನಿತರಾಗಿದ್ದರು. ಈ ಇಬ್ಬರೂ ನಾಯಕರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಇದಕ್ಕೂ ಮುನ್ನ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಆಂಧ್ರದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕೇಂದ್ರದಲ್ಲಿ ಆ ರಾಜ್ಯವನ್ನು ಪ್ರತಿನಿಧಿಸಿರುವ ಸಚಿವರ ಜತೆ ಬೇಡಿಕೆ ಕುರಿತು ಚರ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.