ADVERTISEMENT

ತೆಲಂಗಾಣ ರಚನೆಗೆ ಸಂಪುಟ ಟಿಪ್ಪಣಿ ಸಿದ್ಧ

ಸೋನಿಯಾ ಒಪ್ಪಿಗೆಗೆ ಕಾಯುತ್ತಿರುವ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಪ್ರತ್ಯೇಕ ತೆಲಂಗಾಣ ರಚನೆ ಕುರಿತಂತೆ ಗೃಹ ಸಚಿವಾಲಯವು ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಲು ಟಿಪ್ಪಣಿ ಸಿದ್ಧಪಡಿಸಿದೆ.ಆದರೆ, ಇದಕ್ಕೆ `ರಾಜಕೀಯ ಅನುಮತಿ' ದೊರಕಬೇಕಿರುವ ಕಾರಣ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಮೆರಿಕದಿಂದ ವಾಪಸ್ ಬರುವುದನ್ನೇ ಎದುರು ನೋಡಲಾಗುತ್ತಿದೆ.

`ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ನಿರ್ದೇಶನದಂತೆ ಟಿಪ್ಪಣಿ ಸಿದ್ಧಪಡಿಸಲಾಗಿದೆ. ರಾಜಕೀಯ ಅನುಮತಿಗಾಗಿ ಕಾಯುತ್ತಿದ್ದೇವೆ. ಸೋನಿಯಾ ಗಾಂಧಿ ಅವರು ವಿದೇಶದಿಂದ ಬಂದ ಬಳಿಕವಷ್ಟೆ ಈ ಅನುಮತಿ ದೊರಕುತ್ತದೆ' ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈದ್ಯಕೀಯ ತಪಾಸಣೆಗಾಗಿ ಇದೇ 2ರಂದು ಅಮೆರಿಕಕ್ಕೆ ತೆರಳಿರುವ ಸೋನಿಯಾ ಗಾಂಧಿ ಅವರು ಇನ್ನೊಂದು ವಾರದೊಳಗೆ ವಾಪಸ್ ಬರುವ ನಿರೀಕ್ಷೆ ಇದೆ. ಈ ಮಧ್ಯೆ, ತೆಲಂಗಾಣ ರಚನೆ ಘೋಷಣೆಯ ನಂತರ ಪಕ್ಷದಲ್ಲಿ ಆಂತರಿಕವಾಗಿ ಮತ್ತು ಆಂಧ್ರದಲ್ಲಿ ಭುಗಿಲೆದ್ದಿರುವ ಪ್ರತಿರೋಧವನ್ನು ಶಮನ ಮಾಡಲು ಕಾಂಗ್ರೆಸ್ ವರಿಷ್ಠರು ರಚಿಸಿರುವ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಪಕ್ಷದ ಅಧ್ಯಕ್ಷರಿಗೆ ಇನ್ನಷ್ಟೆ ಸಲ್ಲಿಸಬೇಕಿದೆ.

ಆಂಧ್ರ ವಿಭಜನೆಗೆ ವಿರೋಧ: ಮುಂದುವರಿದ ಪ್ರತಿಭಟನೆ
ಹೈದರಾಬಾದ್ (ಪಿಟಿಐ
): ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಸೀಮಾಂಧ್ರ ಮತ್ತು ರಾಯಲಸೀಮೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಭಾನುವಾರ ಕೂಡ ಮುಂದುವರಿದಿದೆ. ವಿದ್ಯಾರ್ಥಿಗಳು ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೀಮಾಂಧ್ರ ಮತ್ತು ರಾಯಲಸೀಮೆಯ 13 ಜಿಲ್ಲೆಗಳಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ `ಸಮೈಕಾಂಧ್ರ' ಚಳವಳಿ ನಡೆಸುತ್ತಿದ್ದಾರೆ.

ಭಾನುವಾರ ಕೂಡ ಕರ್ನೂಲ್, ಅನಂತಪುರ, ಪಶ್ಚಿಮ ಗೋದಾವರಿ ಮತ್ತಿತರ ಜಿಲ್ಲೆಗಳಲ್ಲಿ ಚಳವಳಿಗಾರರು ಮಾನವ ಸರಪಳಿ ನಿರ್ಮಿಸಿ ಅಖಂಡ ಆಂಧ್ರಕ್ಕಾಗಿ ಒತ್ತಾಯಿಸಿದರು. ಗುಂಟೂರು ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜಯನಗರಂ ಜಿಲ್ಲೆಯಲ್ಲಿ ಟಿಡಿಪಿ ಕಾರ್ಯಕರ್ತರು ರಸ್ತೆಯಲ್ಲಿ ಕಸ ಗುಡಿಸುವ ಮೂಲಕ ಪ್ರತಿಭಟನೆ ನಡೆಸಿದರೆ, ಕರ್ನೂಲ್‌ನಲ್ಲಿ ಪ್ರತಿಭಟನಾಕಾರರು ರಸ್ತೆ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು.

ಅನಂತಪುರದಲ್ಲಿ ಪ್ರತಿಭಟನಾಕಾರರು ಬೆಂಗಳೂರಿಗೆ ಸಂಪರ್ಕಿಸುವ ಹೆದ್ದಾರಿ ತಡೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡ-ರಾಜಮಂಡ್ರಿ ರಸ್ತೆಯಲ್ಲಿ ಮಹಿಳೆಯರು ರಸ್ತೆ ತಡೆ ನಡೆಸಿದರು. `ಆಂಧ್ರ ಪ್ರದೇಶ ಉಳಿಸಿ' ಆಂದೋಲನ ನಡೆಸುತ್ತಿರುವ ಸೀಮಾಂಧ್ರ ಪ್ರದೇಶಕ್ಕೆ ಸೇರಿದ ಗೆಜೆಟೆಡ್‌ಯೇತರ ಅಧಿಕಾರಿಗಳ ಸಂಘದ ಸದಸ್ಯರು ಶನಿವಾರ ಹೈದರಾಬಾದ್‌ನಲ್ಲಿ ಸಭೆ ನಡೆಸುತ್ತಿದ್ದಾಗ ತೆಲಂಗಾಣ ಬೆಂಬಲಿಗರೆಂದು ಶಂಕಿಸಲಾದ ಗುಂಪೊಂದು ದಾಳಿ ನಡೆಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT