ADVERTISEMENT

ತೆಲಂಗಾಣ ಹೋರಾಟ: ಸಂಸದ, ಶಾಸಕರ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 10:50 IST
Last Updated 16 ಅಕ್ಟೋಬರ್ 2011, 10:50 IST

ಹೈದರಾಬಾದ್, (ಪಿಟಿಐ / ಐಎಎನ್ಎಸ್): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒತ್ತಾಯಿಸಿ ನಡೆಯುತ್ತಿರುವ ರೈಲು ತಡೆ ಚಳವಳಿಯು ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರದಿಂದ ಆರಂಭವಾದ ಮೂರು ದಿನಗಳ ರೈಲು ತಡೆ ಚಳವಳಿಗೆ ಬೆಂಬಲಿಸಿ, ಶನಿವಾರ ಪೊಲೀಸರ ಬಂಧನಕ್ಕೆ ಒಳಗಾಗಿದ್ದ ಕೆಲ ಸಂಸದ ಮತ್ತು ಶಾಸಕರನ್ನು ಭಾನುವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.

ಇಲ್ಲಿನ ಖಮ್ಮಮ್ ಜಿಲ್ಲೆಯ ಗಾಂಧಿಪುರಮ್ ನಲ್ಲಿ ರೈಲು ತಡೆ ಚಳವಳಿಯನ್ನು ನಡೆಸುತ್ತಿದ್ದ ತೆಲಂಗಾಣ ಪರ ಕಾರ್ಯಕರ್ತರ ಗುಂಪೊಂದು ರೈಲು ಹಳಿಗಳ ಮೇಲೆಯೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದರೊಂದಿಗೆ ಪ್ರತಿಭಟನೆ ನಡೆಸಿದರು.

ಇದರೊಂದಿಗೆ 10 ಜನ ಎಬಿವಿಪಿ ಕಾರ್ಯಕರ್ತರ ಗುಂಪೊಂದು ಇಲ್ಲಿನ ಮಂತ್ರಿಗಳ ಕ್ವಾರ್ಟಸ್ ಬಳಿ ಪ್ರತಿಭಟನೆಯನ್ನು ನಡೆಸುತ್ತಿದ್ದ ವೇಳೆಯಲ್ಲಿ ಅವರನ್ನು ಪೊಲೀಸರು  ಬಂಧಿಸಿದರು.

ನಲ್ಗೊಂಡ, ಮೆಹಬೂಬನಗರ, ನಿಜಮಾಬಾದ್ ಮತ್ತು ವಾರಂಗಲ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈಲ್ವೆ ಸೇವೆಗೆ ಅಡ್ಡಿ ಪಡಿಸಲು ಯತ್ನಿಸಿದ ಪ್ರತಿಭಟನಾಕಾರರ ಯೋಜನೆಗಳನ್ನು ಪೊಲೀಸರು ವಿಫಲಗೊಳಿಸಿವುದರೊಂದಿಗೆ ಅವರನ್ನು ವಶಕ್ಕೆ ತೆಗೆದುಕೊಂಡಿರುವುದು ವರದಿಯಾಗಿದೆ.

ADVERTISEMENT

ಇದೇ ಸಂದರ್ಭದಲ್ಲಿ ತೆಲಂಗಾಣ ಹೋರಾಟದ ಕೆಲ ಕಾರ್ಯಕರ್ತರು ತೆಲಂಗಾಣ ಹೋರಾಟದಲ್ಲಿ ಭಾಗವಹಿಸಿ, ಬಂಧಿತರಾಗಿರುವ ನಮ್ಮ ನಾಯಕರು ಸೇರಿದಂತೆ ಇತರೆ ಬೆಂಬಲಿಗರನ್ನು ಬಿಡುಗಡೆ ಮಾಡುವಂತೆ ಹೈದರಾಬಾದ್ ಸೇರಿದಂತೆ ತೆಲಂಗಾಣ ಪ್ರಾಂತದ ವಿವಿಧೆಡೆಯಲ್ಲಿ ಪ್ರತಿಭಟನೆ ನಡೆಸಿ, ಒತ್ತಾಹಿಸಿದರು.

ನ್ಯಾಯಾಂಗ ಬಂಧನ: ರೈಲು ತಡೆ ಚಳವಳಿಯಲ್ಲಿ ಶನಿವಾರ ಭಾಗವಹಿಸಿ, ಪ್ರತಿಭಟನೆಯನ್ನು ನಡೆಸಿದ್ದ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ ಎಸ್) ಸಂಸದೆ ವಿಜಯಶಾಂತಿ ಸೇರಿದಂತೆ ಇತರೆ ಎಂಟು ಪ್ರತಿಭಟನಕಾರರನ್ನು ಇಲ್ಲಿನ ಸಿಕಂದರಾಬಾದ್ ನ ರೈಲ್ವೆ ನ್ಯಾಯಾಲಯವು ಅ. 22ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿ, ಬಂಧಿತರನ್ನು ಚಂಚಲಗುಡ ಕೇಂದ್ರ ಕಾರಗೃಹಕ್ಕೆ ಕಳುಹಿಸಿತು.

ವಾರಂಗಲ್ ಜಿಲ್ಲೆಯ ಕಾಂಗ್ರೆಸ್ ಸಂಸದ ಎಸ್. ರಾಜಯ್ಯ ಅವರು ಪೊಲೀಸ್ ವಶದಲ್ಲಿದ್ದು, ಮುಂದಿನ ದಿನಗಳಲ್ಲಿ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡೆಸುವ ಸಾಧ್ಯತೆ ಇದೆ.

ಕರೀಂನಗರ ಜಿಲ್ಲೆಯ ಕಾಂಗ್ರೆಸ್ ಸಂಸದ ಜಿ. ವಿವೇಕ್ ಸೇರಿದಂತೆ ಇತರೆ 16 ಜನರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಬಿಡುಗಡೆ: ಈ ಹಿಂದೆ ಸಿಕಂದರಾಬಾದ್ ನ ರೈಲ್ವೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದ, ಟಿಆರ್ ಎಸ್ ಸಂಸದೆ ವಿಜಯಶಾಂತಿ ಅವರನ್ನು ಭಾನುವಾರ ಮಧ್ಯಾಹ್ನ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ, ಆದೇಶ ಹೊರಡಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇವರೊಂದಿಗೆ ಕೆ. ಚಂದ್ರಶೇಖರ್ ರಾವ್ ಅವರ ಮಗ ಕೆ.ಟಿ. ರಾಮರಾವ್ ಸೇರಿದಂತೆ ಕೆ. ಕವಿತಾ ಹಾಗೂ ಅವರ ಬೆಂಬಲಿಗರನ್ನು ಕೂಡ ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.