ADVERTISEMENT

ದತ್ ಶರಣಾಗತಿಗೆ ತಿಂಗಳ ಕಾಲಾವಕಾಶ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST
ಸಂಜಯ್ ದತ್
ಸಂಜಯ್ ದತ್   

ನವದೆಹಲಿ (ಪಿಟಿಐ): ನ್ಯಾಯಾಲಯಕ್ಕೆ ಶರಣಾಗಲು ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಸುಪ್ರೀಂ ಕೋರ್ಟ್ ಒಂದು ತಿಂಗಳ ಕಾಲಾವಕಾಶ ನೀಡಿದೆ.

1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್ ಅವರು ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ಏಪ್ರಿಲ್ 18ರ ಒಳಗಾಗಿ ಶರಣಾಗಬೇಕಾಗಿತ್ತು.

ಈಗಾಗಲೇ ತಾವು ನಟಿಸಲು ಒಪ್ಪಿಕೊಂಡಿರುವ ಚಿತ್ರಗಳ ಶೂಟಿಂಗ್ ಪೂರೈಸಬೇಕಾಗಿದೆ. ಈ ಚಿತ್ರಗಳಿಗೆ ನಿರ್ಮಾಪಕರು ರೂ 278 ಕೋಟಿ ಬಂಡವಾಳ ಹೂಡಿದ್ದಾರೆ. ಟಾಡಾ ನ್ಯಾಯಾಲಯದ ಮುಂದೆ ಶರಣಾಗಲು ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ದತ್ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು.

ಮಾನವೀಯತೆ ಆಧಾರ ದಲ್ಲಿ ದತ್ ಅರ್ಜಿ ಪರಿ ಗಣಿಸಿದ ಸುಪ್ರೀಂ ಕೋರ್ಟ್, ಶರಣಾಗತಿ ಅವಧಿಯನ್ನು ಒಂದು ತಿಂಗಳು ವಿಸ್ತರಿಸಿತು. ಆದರೆ ಮತ್ತೆ ಹೆಚ್ಚು ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದೂ ಸ್ಪಷ್ಟ ಪಡಿಸಿತು.

`ಶರಣಾಗತಿ ಅವಧಿಯನ್ನು ಆರು ತಿಂಗಳು ವಿಸ್ತರಿಸಲು ಸಾಧ್ಯವಿಲ್ಲ, ಆದರೆ, ಅರ್ಜಿದಾರರು ಅರ್ಜಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಹಾಗೂ ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ಶರಣಾಗತಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡುತ್ತೇವೆ' ಎಂದು ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಮತ್ತು ಬಿ.ಎಸ್. ಚೌಹಾಣ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.

ಚಿತ್ರ ತಯಾರಕರು ನಿರಾಳ (ಮುಂಬೈ ವರದಿ): ಸುಪ್ರೀಂ ಕೋರ್ಟ್‌ನ ನಿರ್ಧಾರದಿಂದ ದತ್ ಅವರ ಮೇಲೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ಚಿತ್ರ ನಿರ್ಮಾಪಕರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.

ಆದರೆ, ಶರಣಾಗತಿಗೆ ಇನ್ನಷ್ಟು ಹೆಚ್ಚಿನ ಕಾಲಾವಕಾಶ ನೀಡಬೇಕಿತ್ತು ನಿರ್ಮಾಪಕರು ಅಭಿಪ್ರಾಯಪಟ್ಟಿದ್ದಾರೆ. ದತ್ ಅವರು ಈ ಒಂದು ತಿಂಗಳ ಅವಧಿಯಲ್ಲಿ ರಾಜು ಹೀರಾನಿ ಅವರ  ಭಾರಿ ಬಜೆಟ್‌ನ `ಪೀಕೆ', `ಝಂಜೀರ್'  ಸೇರಿದಂತೆ ಏಳು ಚಿತ್ರಗಳ ಶೂಟಿಂಗ್ ಪೂರೈಸಬೇಕಾಗಿದೆ. ಈ ಚಿತ್ರಗಳಿಗಾಗಿ 278 ಕೋಟಿ ಬಂಡವಾಳ ಹೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.