ADVERTISEMENT

ದಲಿತ ಕ್ರೈಸ್ತರು, ಮುಸ್ಲಿಮರಿಗೆ ಪರಿಶಿಷ್ಟ ಜಾತಿ ಸ್ಥಾನ

ಸಂವಿಧಾನ, ಕಾನೂನು ತಜ್ಞರ ಒಲವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ನವದೆಹಲಿ: ದಲಿತ ಕ್ರೈಸ್ತರು ಹಾಗೂ ದಲಿತ ಮುಸ್ಲಿಮರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವ ಕುರಿತಂತೆ ಸಂವಿಧಾನ ತಜ್ಞರು ಹಾಗೂ ಕಾನೂನು ಸಲಹೆಗಾರರು ಒಲವು ವ್ಯಕ್ತಪಡಿಸಿದ್ದಾರೆ.

ಸೋಮವಾರ ಇಲ್ಲಿ ಆಯೋಜಿಸಿದ್ದ `ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ದಲಿತ ಮುಸ್ಲಿಮ್ ಹಾಗೂ ದಲಿತ ಕ್ರೈಸ್ತರ ಸೇರ್ಪಡೆ: ಸಂವಿಧಾನದತ್ತ ಹಾಗೂ ಸಾಮಾಜಿಕ ನ್ಯಾಯ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಹಲವು ತಜ್ಞರು, ದಲಿತ ಮುಸ್ಲಿಮ್ ಹಾಗೂ ದಲಿತ ಕ್ರೈಸ್ತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡದೇ ಇರುವುದು ಸಂವಿಧಾನದ 14ನೇ ಕಲಂ ಕಲ್ಪಿಸಿದ ಸಮಾನತೆ ಆಶಯಕ್ಕೆ ಭಂಗ ತಂದಂತೆ ಎಂದು ವ್ಯಾಖ್ಯಾನಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ.ರೆಹಮಾನ್ ಖಾನ್, ದಲಿತ ಮುಸ್ಲಿಮರು ಹಾಗೂ ಕ್ರೈಸ್ತರು ತಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಲು ಸಂವಿಧಾನದ ತಿದ್ದುಪಡಿ ಮಾಡುವಂತೆ ಒತ್ತಾಯಿಸಿರುವುದು ಸಮರ್ಥನೀಯ ಎಂದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಎಂ.ಅಹಮದಿ, ಪರಿಶಿಷ್ಟ ಜಾತಿ ಸ್ಥಾನಮಾನ ನೀಡಲು ನಿರಾಕರಿಸುವುದು ಭಾರತ ಸಂವಿಧಾನದ 14ನೇ ಕಲಂನ ಆಶಯಕ್ಕೆ ಧಕ್ಕೆ ತಂದಂತೆ ಎಂದು  ವ್ಯಾಖ್ಯಾನಿಸಿದರು.

ದೆಹಲಿ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸತೀಶ ದೇಶಪಾಂಡೆ, ಈ ತಾರತಮ್ಯಕ್ಕೆ ಯಾವುದೇ ಸಮರ್ಥನೆಇಲ್ಲ ಎಂದು ಪ್ರತಿಪಾದಿಸಿದರು.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ನ `ಸೆಂಟರ್ ಫಾರ್ ಸ್ಟಡಿ ಆಫ್ ಸೋಶಿಯಲ್ ಎಕ್ಸ್‌ಕ್ಲೂಸನ್ ಅಂಡ್ ಇನ್‌ಕ್ಲೂಸಿವ್ ಪಾಲಿಸಿ' (ಸಿಎಸ್‌ಎಸ್‌ಇಐಪಿ) ನಿರ್ದೇಶಕ ಎಸ್.ಜಾಫೆಟ್ ಮಾತನಾಡಿ, ಕೇವಲ ಹಿಂದೂ ಧರ್ಮ ಅನುಸರಿಸುತ್ತಿರುವ ದಲಿತರು ಪರಿಶಿಷ್ಟ ಜಾತಿಗೆ ಸೇರುತ್ತಾರೆ ಎಂಬ 1950ರ ರಾಷ್ಟ್ರಪತಿ ಆದೇಶ ತಿದ್ದುಪಡಿ ಬೇಡಿಕೆ ಹೊಸತೇನಲ್ಲ.

ಈ ಆದೇಶದ ಬಳಿಕ 1956 ಹಾಗೂ 1990ರಲ್ಲಿ ತಿದ್ದುಪಡಿ ಮಾಡಿ ಸಿಖ್ ಮತ್ತು ಬೌದ್ಧರಿಗೆ ಪರಿಶಿಷ್ಟ ಸ್ಥಾನಮಾನ ಕಲ್ಪಿಸಲಾಗಿದೆ ಎಂದರು. ಹೈದರಾಬಾದ್‌ನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ನ ಪ್ರೊ. ಜಿ.ಹರಗೋಪಾಲ್ ಹಾಗೂ ದೆಹಲಿಯ ನ್ಯಾಷನಲ್ ಲಾ ಕಾಲೇಜಿನ ಬಾಬು ಮ್ಯಾಥ್ಯೂ  ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.