ADVERTISEMENT

ದಿಗಂಬರ್ ಕಾಮತ್ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಪಣಜಿ (ಪಿಟಿಐ): ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದಿಗಂಬರ ಕಾಮತ್ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದರೆ ಅವರು ಸ್ವತಃ ಈ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ಗೋವಾ ವಿರೋಧ ಪಕ್ಷದ ನಾಯಕ ಮನೋಹರ ಪರಿಕ್ಕರ್ ಅಭಿಪ್ರಾಯಪಟ್ಟಿದ್ದಾರೆ.

ವಿಧಾನ ಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಖ್ಯಸ್ಥರೂ ಆದ ಪರಿಕ್ಕರ್ ಅವರು ಗುರುವಾರ ವಿಧಾನಸಭೆಯಲ್ಲಿ ಪೂರಕ ಅನುದಾನಗಳ ಬೇಡಿಕೆಯ ಕುರಿತಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ದುಃಸ್ಥಿತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

`ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ರಾಜ್ಯದ ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆಗಳ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಿರುವುದನ್ನು ನೋಡಿದರೆ ಕರಾವಳಿಯಲ್ಲಿನ ಎಲ್ಲ ಗಣಿ ಅಕ್ರಮಗಳಲ್ಲಿ ಇವರೂ ಪಾಲ್ಗೊಂಡಿರಬಹುದು ಎಂದು ನಾವು ತೀರ್ಮಾನಿಸಬೇಕಾಗುತ್ತದೆ~ ಎಂದರು.

`ರಾಜ್ಯದಿಂದ ಹೊರಕ್ಕೆ ಸಾಗಿಸಲಾಗಿರುವ 54 ದಶಲಕ್ಷ ಮೆಟ್ರಿಕ್ ಟನ್ ಅದಿರಿನಲ್ಲಿ ಕೇವಲ 30 ದಶಲಕ್ಷ ಮೆಟ್ರಿಕ್ ಟನ್ ಮಾತ್ರವೇ ಕಾನೂನು ಬದ್ಧವಾಗಿದೆ. ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳಲ್ಲಿ ಸಮಪರ್ಕಕ ಮಾನವ ಶಕ್ತಿ, ಬಲ ಹಾಗೂ ಸೂಕ್ತ ವಿಜ್ಞಾನಿಗಳು ಇಲ್ಲವಾಗಿದ್ದಾರೆ. ಸರ್ಕಾರ ಉದ್ದೇಶಪೂರ್ವಕವಾಗಿಯೇ ಈ ಇಲಾಖೆಗಳಲ್ಲಿ ಬಲ ತುಂಬಲು ಇಚ್ಛಸುತ್ತಿಲ್ಲವೇನೊ ಎಂದು ಯೋಚಿಸುವಂತಹ ಪರಿಸ್ಥಿತಿ ಇದೆ~ ಎಂದು ಆರೋಪಿಸಿದರು.

`ರಾಜ್ಯದಲ್ಲಿ ಹಸಿರು ತೆರಿಗೆ ವಿಧಿಸುವುದಾಗಿ ಮುಖ್ಯಮಂತ್ರಿಗಳು ಈ ಹಿಂದೆಯೇ ಪ್ರಕಟಿಸಿದ್ದರು. ಆದರೆ ಇದುವರೆವಿಗೂ ಆ ದಿಸೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ~ ಎಂದರು. 12 ವರ್ಷಗಳಿಂದ ನಿರಂತರವಾಗಿ ರಾಜ್ಯದ ಗಣಿ ಇಲಾಖೆಯ ಸಚಿವರಾಗಿರುವ ಕಾಮತ್ ಅವರ ವಿರುದ್ಧ ಪ್ರತಿಪಕ್ಷಗಳು ಈ ಸಂದರ್ಭದಲ್ಲಿ ತೀವ್ರ ವಾಗ್ದಾಳಿ ನಡೆಸಿದವು.
 

`ಸತ್ಯಕ್ಕೆ ಜಯ~

ಪಣಜಿ (ಪಿಟಿಐ): `ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ~ ಎಂದು ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಗುರುವಾರ ನಡೆದ ಧನವಿನಿಯೋಗ ಮಸೂದೆಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರ ನಿರಾಕ್ಷೇಪಣೆ ಪತ್ರ ನೀಡಿಕೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ. ಅಕ್ರಮ ಗಣಿಗಾರಿಕೆ ತಡೆಯಲು ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡಿದೆ. ರಾಜಧನದ ರೂಪದಲ್ಲಿ ಬೊಕ್ಕಸಕ್ಕೆ ಬರಬೇಕಾದ ಆದಾಯದಲ್ಲಿ ಒಂದೇ ಒಂದು ನಯಾ ಪೈಸೆಯೂ ಲೋಪವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.