ADVERTISEMENT

ದೀಕ್ಷಿತ್ ಗೆ ಲಕ್ಷ ಪತ್ರ ಸಲ್ಲಿಕೆ: ಆಟೋ ರಿಕ್ಷಾ ಮೆರವಣಿಗೆಗೆ ಪೊಲೀಸ್ ತಡೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 10:23 IST
Last Updated 1 ಏಪ್ರಿಲ್ 2013, 10:23 IST

ನವದೆಹಲಿ (ಐಎಎನ್ಎಸ್): 'ನೀರು ಮತ್ತು ವಿದ್ಯುತ್ ದರ ಹೆಚ್ಚಳ'ವನ್ನು ಪ್ರತಿಭಟಿಸಿ ಲಕ್ಷಾಂತರ ಪತ್ರಗಳನ್ನು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಸಲ್ಲಿಸಲು ಆಟೋ ರಿಕ್ಷಾಗಳಲ್ಲಿ ಹೊರಟಿದ್ದ ಆಮ್ ಆದ್ಮಿ ಪಾರ್ಟಿಯ (ಎಎಪಿ- ಆಪ್) ಕಾರ್ಯಕರ್ತರನ್ನು ಪೊಲೀಸರು ಸೋಮವಾರ ಮಾರ್ಗಮಧ್ಯದಲ್ಲೇ ತಡೆದರು.

ಪೂರ್ವ ದೆಹಲಿಯ ಪ್ರಗತಿ ಮೈದಾನದ ಬಳಿ ಭೈರೋನ್ ಮಾರ್ಗದಲ್ಲಿ 'ಆಪ್' ಕಾರ್ಯಕರ್ತರನ್ನು ಒಯ್ಯುತ್ತಿದ್ದ 272 ಆಟೋ ರಿಕ್ಷಾಗಳನ್ನು ಮತ್ತು  ಆ ಆಟೋ ರಿಕ್ಷಾಗಳ ಜೊತೆ ನಡೆದು ಹೋಗುತ್ತಿದ್ದ ಅರವಿಂದ ಕೇಜ್ರಿವಾಲ್ ಬೆಂಬಲಿಗರನ್ನು ಪೊಲೀಸರು ತಡೆದರು. ಅವರಲ್ಲಿ ಬಹುತೇಕ ಮಂದಿ ತ್ರಿವರ್ಣ ಧ್ವಜಗಳನ್ನು ಹಿಡಿದು ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು.

'ಪ್ರಗತಿ ಮೈದಾನ ಬಳಿ ಭೈರೋನ್ ಮಾರ್ಗದಲ್ಲಿ ದೆಹಲಿ ಪೊಲೀಸರು ನಮ್ಮನ್ನು ತಡೆದರು. ಮುಖ್ಯಮಂತ್ರಿಗಳ ನಿವಾಸಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಆಟೋ ರಿಕ್ಷಾಗಳು ಮತ್ತು ಜನ ಹೋಗಲು ಬಿಡಲಾಗುವುದಿಲ್ಲ ಎಂದು ಅವರು ಹೇಳಿದರು. ಪತ್ರಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಲು ತೆರಳುವ ಪ್ರತಿನಿಧಿಗಳನ್ನು ಒಯ್ಯಲು ಬಸ್ಸುಗಳ ವ್ಯವಸ್ಥೆ ಮಾಡುವುದಾಗಿ ಪೊಲೀಸರು ಹೇಳಿದರು' ಎಂದು ಆಪ್ ವಕ್ತಾರ ಅಶ್ವತಿ ಮುರಳೀಧರನ್ ಐಎಎನ್ಎಸ್ ಗೆ ತಿಳಿಸಿದರು.

272 ಆಟೋ ರಿಕ್ಷಾಗಳು ದೆಹಲಿಯ 272 ಮುನಿಸಿಪಲ್ ವಾರ್ಡ್ ಗಳನ್ನು ಪ್ರತಿನಿಧಿಸಿವೆ ಎಂದು ಅವರು ನುಡಿದರು.

ಈ ವಿಶಿಷ್ಟ ಪ್ರತಿಭಟನೆ ಆಪ್ ಸ್ಥಾಪಕ ನಾಯಕ ಅರವಿಂದ ಕೇಜ್ರಿವಾಲ್ ಅವರು ಅನಿರ್ದಿಷ್ಟ ನಿರಶನ ನಡೆಸುತ್ತಿರುವ ಸುಂದರ ನಗರಿಯಿಂದ ಹೊರಟಿತ್ತು. ನೀರು ಮತ್ತು ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಕೇಜ್ರಿವಾಲ್ ಮಾರ್ಚ್ 23ರಂದು ಆರಂಭಿಸಿದ ಅನಿರ್ದಿಷ್ಟ ಉಪವಾಸ ಸೋಮವಾರ 10ನೇ ದಿನ ಪ್ರವೇಶಿಸಿದೆ.

ಶೀಲಾ ದೀಕ್ಷಿತ್ ಅವರ ನಿವಾಸಕ್ಕೆ ಹೊರಟ ಮೆರವಣಿಗೆಯಲ್ಲಿ ಕೇಜ್ರಿವಾಲ್ ಪಾಲ್ಗೊಂಡಿರಲಿಲ್ಲ. ರಾಜಧಾನಿ ದೆಹಲಿಯ ಸುಮಾರು 6 ಲಕ್ಷ ಮಂದಿ ನಿವಾಸಿಗಳು ಪ್ರತಿಭಟನಾ ಪತ್ರಗಳಿಗೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.